ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವರದಕ್ಷಿಣೆ ನಿರ್ಮೂಲನೆಗೆ ಸಂಕಲ್ಪ ಮಾಡಿ

Mainashree
Updated On : 3 Jun 2013, 10:59 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜೂ. 2
ವರದಕ್ಷಿಣೆ ನಿರ್ಮೂಲನೆಗೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಮಿಥುನ್ ಪಾಟೀಲ ಹೇಳಿದರು.
ಈಚೆಗೆ ಅವರು ಸಮೀಪದ ಕಣವಿ ವೀರಭದ್ರೇಶ್ವರ ದೇಗುಲ ಆವರಣದಲ್ಲಿ ರಾಠೋಡ ಬಂಧುಗಳ ಆಯೋಜಿಸಿದ 22 ಜೋಡಿ ಸರ್ವಧರ್ಮ ಉಚಿತ ಸಾಮೂಹಿಕ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಾಗರಿಕ ಸಮಾಜ ಅಭಿವೃದ್ಧಿಗೆ ಮಾರಕವಾದ ವರದಕ್ಷಿಣೆ ಪಿಡುಗು ತೊಲಗಿಸಲು ಸರ್ವ ಸಮುದಾಯದ ಜನ ಪಣತೊಡಬೇಕು. ಈ ಪಿಡುಗನ್ನು ತೊಲಗಿಸಲು ಸಾಮೂಹಿಕ ಮದುವೆ ಸಹಕಾರಿಯಾಗಬಲ್ಲದು. ಸಾಮೂಹಿಕ ವಿವಾಹ ಬಡ ಜನರನ್ನು ಸಾಲದಿಂದ ಮುಕ್ತಿ ಮಾಡಲಿದೆ. ಶ್ರೀಮಂತರು ತಾವೂ ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ಸತ್ಕಾರ್ಯಕ್ಕೆ ಬಳಸಬೇಕು.
ಇಂತಹ ಸಾಮಾಜಿಕ ಕಳಕಳಿಯಿಂದ ರಾಠೋಡ ಬಂಧುಗಳು ಕೈಗೊಂಡ ಕಾರ್ಯ ಶ್ಲಾಘನೀಯ. ಮದುವೆ ಬಡ ಕುಟುಂಬಗಳಿಗೆ ಹೊರೆಯಾಗಿದ್ದನ್ನು ಇಳಿಸಲು ಸಾಮೂಹಿಕ ವಿವಾಹ ಸಹಕಾರಿ. ಆಡಂಬರ, ವರದಕ್ಷಿಣೆ ಪೀಡುಗು ನಿರ್ಮೂಲನೆಗೆ ಸಾಮೂಹಿಕ ವಿವಾಹ ರಾಮಬಾಣ. ಸಾಲದ ಸುಳಿಯಲ್ಲಿ ಸಿಲುಕಿ ನಲುಗಬಾರದೆಂಬ ಉದ್ದೇಶದಿಂದ ಸರ್ವಧರ್ಮ ಸಾಮೂಹಿಕ ವಿವಾಹ ನಡೆಸಲಾಗಿದೆ ಎಂದರು.
ಸೇವಾಲಾಲ ಸಮಾಜ ಧರ್ಮಗುರು ಶಂಕರ ಗೋಸಾವಿ ಶ್ರೀಗಳು ಮಾತನಾಡಿ, ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಬದುಕು ಕಂಡು ಕೊಳ್ಳಬಹುದು. ಜತೆಗೆ ಪರಸ್ಪರ ಪ್ರೀತಿ, ವಿಶ್ವಾಸ ವೃದ್ಧಿಸುತ್ತದೆ. ನವ ವಿವಾಹಿತರು ಗುರು-ಹಿರಿಯರಲ್ಲಿ ಭಕ್ತಿಯಿಂದ ನಡೆದುಕೊಂಡು ಬಾಳು ಹಸನಾಗಿಸಿಕೊಳ್ಳಿ ಎಂದು ಹಾರೈಸಿದರು.
ಸೋಮಣ್ಣ ರಾಠೋಡ ಅವರನ್ನು ಸನ್ಮಾನಿಸಲಾಯಿತು. ವೀರಣ್ಣ ಸೊನ್ನದ, ಪ್ರಶಾಂತ ರಾಠೋಡ, ಶಶಿಧರ ಹೂಗಾರ, ಉಮೇಶ ರಾಠೋಡ, ಕೊಟ್ರೇಶ ಚಿಲಕಾ, ಕುಮಾರ ರಾಠೋಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement