ಸಿದ್ಧತೆಯೊಂದಿಗೆ ಶಾಲೆ ಪ್ರಾರಂಭಿಸಿರುವುದು ಉತ್ತಮ
ಲಕ್ಷ್ಮೇಶ್ವರ: ಯಾವುದೇ ಒಳ್ಳೆಯ ಕಾರ್ಯ ಪ್ರಾರಂಭಿಸುವಾಗ ಸಕಲ ಸಿದ್ಧತೆಯೊಂದಿಗೆ ಪ್ರಾರಂಭಿಸುವುದು ಅವಶ್ಯ. ಅದರಂತೆ ಸರ್ಕಾರವು 2013-14ನೇ ಸಾಲಿನ ಶಾಲೆಯ ಪ್ರಾರಂಭೋತ್ಸವವನ್ನು ಎಲ್ಲ ಸಿದ್ಧತೆಗಳೊಂದಿಗೆ ಪ್ರಾರಂಭಿಸಿರುವುದು ಉತ್ತಮವಾಗಿದೆ ಎಂದು ಗದಗ ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ ಹೇಳಿದರು.
ಅವರು ಈಚೆಗೆ ಸಮೀಪದ ಗೊಜನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗದಗ ಜಿಲ್ಲೆಯು ಕಳೆದ 2 ವರ್ಷಗಳಿಂದ ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದು, ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದು ಹೆಮ್ಮೆಯ ಸಂಗತಿ. ಮಕ್ಕಳಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅವುಗಳ ಸದುಪಯೋಗ ಮಾಡಿಕೊಳ್ಳುವುದು ಅವಶ್ಯವಾಗಿದೆ. ಶಿಕ್ಷಕರು ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಶ್ರಮವಹಿಸಿ ಕಾರ್ಯ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಸ್ಪಂದಿಸುವುದು ಅವಶ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ಸರ್ಕಾರಿ ಶಾಲೆಗಳು ಉತ್ತಮ ಪ್ರಗತಿ ಸಾಧಿಸುತ್ತಿರುವುದಕ್ಕೆ ಗೊಜನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಉತ್ತಮ ಉದಾಹರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ಇಲಾಖೆಯು ಶೈಕ್ಷಣಿಕವಾಗಿ ಹಿಂದುಳಿದಂತಹ ಪ್ರದೇಶಗಳಲ್ಲಿ ಪ್ರಗತಿ ಸಾಧಿಸಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದು, ಅದರಲ್ಲಿ ಉತ್ತಮ ಪ್ರಗತಿ ಕಾಣಲಾಗುತ್ತಿದೆ. ಮಕ್ಕಳಿಗೆ ಶಾಲಾ ಪ್ರಾರಂಭಿಕ ಹಂತದಿಂದಲೇ ತೊಂದರೆಯಾಗದಂತೆ ಸರ್ಕಾರ ಮುತುವರ್ಜಿ ವಹಿಸಿ ಅನೇಕ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಅದಕ್ಕಾಗಿ ಶಾಲಾ ಪ್ರಾರಂಭೋತ್ಸವ ಮಾತ್ರವಲ್ಲ ಎಲ್ಲ ಆರಂಭಿಕ ಕಾರ್ಯಗಳು ನೀರಸವಾಗಿರುವುದು ಬೇಡ ಎಂದು ಸಲಹೆ ನೀಡಿದ ಅವರು, 2013-14ನೇ ಸಾಲಿನಲ್ಲಿ ಶಾಲೆಗಳಲ್ಲಿ ಪ್ರಾರಂಭದಿಂದಲೇ ಕಲಿಕೆಗೆ ಪೂರಕವಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಅದನ್ನು ಅಧಿಕಾರಿಗಳು ಮಿಂಚಿನ ಸಂಚಾರದ ಮೂಲಕ ಪರಿಶೀಲನೆ ಮಾಡುತ್ತಿದ್ದಾರೆ. ಈ ದಿಸೆಯಲ್ಲಿ ಪ್ರಾರಂಭದ ಹಂತದಲ್ಲಿರುವ ಉತ್ಸಾಹ ವರ್ಷವಿಡಿ ಇರಲಿ ಎಂದು ಬಯಸುವುದಾಗಿ ಹೇಳಿದರು. ಯುವ ಮುಖಂಡ ಲೋಕೇಶ ದೊಡ್ಡಮನಿ, ಗ್ರಾಪಂ ಸದಸ್ಯ ಶಿವನಗೌಡ ಪಾಟೀಲ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ರವಿ ಬೆಂಚಳ್ಳಿ ವಹಿಸಿದ್ದರು.
ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಹರಳಕ್ಕ ಕರೆಣ್ಣವರ, ಚಂದ್ರಗೌಡ ಪಾಟೀಲ, ತಿಪ್ಪಣ್ಣ ಸಂಶಿ, ನೀಲಪ್ಪ ಶೆರಸೂರಿ, ನೋಡೆಲ್ ಅಧಿಕಾರಿ ಆರ್.ಎಂ. ರಡ್ಡೇರ, ಗ್ರಾಪಂ ಸದಸ್ಯ ಗಂಗನಗೌಡ ಪಾಟೀಲ, ನೀಲವ್ವ ಯಳವತ್ತಿ ಸೇರಿದಂತೆ ಬಿಆರ್ಸಿ, ಸಿಆರ್ಸಿ ಮುಖ್ಯಸ್ಥರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಎಂ.ಡಿ. ತಳ್ಳಳ್ಳಿ ಸ್ವಾಗತಿಸಿದರು. ಎ.ಡಿ. ಕುಲಕರ್ಣಿ ನಿರೂಪಿಸಿದರು. ಎಸ್.ಎಂ.ಪಾಟೀಲ ವಂದಿಸಿದರು. ಮಕ್ಕಳಿಗೆ ಶಾಲಾ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.