ಬದುಕುವುದು ಒಂದು ಕಲೆ: ಸ್ವಾಮೀಜಿ
ಗದಗ: ಬದುಕುವುದು ಒಂದು ಕಲೆ, ಎಷ್ಟು ವರ್ಷ ಮನುಷ್ಯ ಬದುಕಿದ ಎನ್ನುವುದು ಮುಖ್ಯವಲ್ಲ, ಹೇಗೆ ಬದುಕಿದ, ಎಷ್ಟು ಜನರಿಗೆ ಉಪಕಾರಿಯಾಗಿದ್ದ ಎನ್ನುವುದು ಮುಖ್ಯವಾಗುತ್ತದೆ ಎಂದು ಹೊಸಳ್ಳಿಯ ಅಭಿನವ ಬೂದೀಶ್ವರ ಶ್ರೀಗಳು ಹೇಳಿದರು.
ಈಚೆಗೆ ಅವರು ನಗರದ ಪ್ರೊಬಸ್ ಕ್ಲಬ್ ಗದಗ-ಬೆಟಗೇರಿ ಇದರ ರಜತಮಹೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಪ್ರೊಬಸ್ ಕ್ಲಬ್ ಹಿರಿಯ ಸದಸ್ಯರ ಬದುಕು ಕಿರಿಯರಿಗೆ ಮಾದರಿಯಾಗಿದೆ. ಸಂಘಟನೆ ಮೂಲಕ ಅವರು ಸಮಾಜದಲ್ಲಿ ಕ್ರಿಯಾಶೀಲತೆಯಿಂದ ಸಾಗುವುದು ಇತರರಿಗೆ ಮಾದರಿಯಾದ ಕಾರ್ಯ ಎಂದರು. ನೇತೃತ್ವ ವಹಿಸಿದ್ದ ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು ಕ್ಲಬ್‌ನ ಕಾರ್ಯಚಟುವಟಿಕೆ, ಸದಸ್ಯರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿ ಅಭಿನಂದಿಸಿದರು.
ಬಸಯ್ಯಶಾಸ್ತ್ರಿ ಹಿರೇಮಠ ಮಾತನಾಡಿದರು. ಆಯುರ್ವೇದಿಕ್ ಕಾಲೇಜಿನ ಪ್ರಾಧ್ಯಾಪಕ ಡಾ. ಉಮೇಶ ಪುರದ, ಹಿರಿಯರು ಅನುಭವಿಸುವ ಅನಾರೋಗ್ಯದ ವಿವರ ನೀಡಿ ವಿವಿಧ ಪರಿಹಾರ ಮಾರ್ಗವನ್ನು ತಿಳಿಸಿಕೊಟ್ಟರು. ಪ್ರೊಬಸ್ ಕ್ಲಬ್ ಅಧ್ಯಕ್ಷ ಎಸ್.ಟಿ. ಜಕ್ಕನಗೌಡರು ಅಧ್ಯಕ್ಷತೆ ವಹಿಸಿದ್ದರು. ಪ್ರೊಬಸ್ ಕ್ಲಬ್‌ನ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಪಿ.ಸಿ. ಕತ್ತಿಶೆಟ್ಟರ ಅಧ್ಯಕ್ಷರಿಗೆ ಕಾಲರ್ ಧಾರಣೆ ಮಾಡಿದರು. ಅಕ್ಕಮ್ಮ ಗುರುಸ್ವಾಮಿಮಠ ಪ್ರಾರ್ಥಿಸಿದರು. ಪ್ರೊ. ಕೆ.ಎಚ್. ಬೇಲೂರ ಸ್ವಾಗತಿಸಿದರು. ಅಂದಾನೆಪ್ಪ ವಿಭೂತಿ ನಿರೂಪಿಸಿದರು. ಎಸ್.ಎ. ಪಾಟೀಲ ವಂದಿಸಿದರು.