ಗತಕಾಲದ ಇತಿಹಾಸ ಬಿಚ್ಚಿಡುವ ಹೆಳವರು
ಕನ್ನಡಪ್ರಭ ವಾರ್ತೆ, ನರೇಗಲ್ಲ, ಜೂ. 4
ಸುಗ್ಗಿಕಾಲ ಆರಂಭವಾಗುತ್ತಿದ್ದಂತೆ ಊರಿನ ಶಾಲಾ ಮೈದಾನ, ಹೊರವಲಯಗಳಲ್ಲಿ ತಾಕ್ಕಾಲಿಕ ಮನೆಗಳು ಅಥವಾ ಶೆಡ್‌ಗಳು ನಿರ್ಮಾಣವಾಗುತ್ತವೆ. ಪಕ್ಕದಲ್ಲಿಯೇ ಕಲ್ಲು ಹೂಡಿ ಒಲೆ ಹೊತ್ತಿಸುತ್ತಿರುವ, ಮುಸುರೆ ತಿಕ್ಕುತ್ತಿರುವ ಮಹಿಳೆಯರು ಕಾಣಿಸಿಕೊಂಡರೆ ವಯಸ್ಸಾದ ವೃದ್ಧೆಯರು ಅಡಕೆ, ಎಲೆ ಜಗಿಯುತ್ತಾ ತಮ್ಮ ಚಿಕ್ಕ ಚಿಕ್ಕ ಮೊಮ್ಮಕ್ಕಳೊಂದಿಗೆ ಕಾಲಹರಣ ಮಾಡುತ್ತಿರುವ ಸನ್ನಿವೇಶ ಕಂಡುಬರುತ್ತದೆ.
ಆಸಕ್ತಿಯಿಂದ ಕಾಲೋನಿಯೆಡೆಗೆ ಹೆಜ್ಜೆ ಹಾಕಿದರೆ ಸಾಕು ಅಲ್ಲಿ ತಲೆಗೆ ಪೇಟಾ, ಧೋತರ ಉಟ್ಟು ಹೆಗಲಮೇಲೊಂದು ಹೊತ್ತಿಗೆಯ ಜತೆಗೆ ಕಾಳು, ದವಸಧಾನ್ಯ, ಬಟ್ಟೆ ಮುಂತಾದವುಗಳನ್ನು ಹೊಂದಿದ್ದ ಗಂಟು ಮೈಮೇಲೊಂದು ಕೋಟನ್ನು ಧರಿಸಿರುವ ವ್ಯಕ್ತಿ ಕಂಡುಬರುತ್ತಾರೆ.
ಸಂಪೂರ್ಣ ಜಾತಕ: ಹೌದು, ನಿಮ್ಮ ಊಹೆ ನಿಜ ಇವರು ನಮ್ಮ ಪೂರ್ವಜರ ಗತಕಾಲ ಬಿಚ್ಚಿಡಲೆಂದೇ ಇರುವ ಹೆಳವರು. ವಂಶಾವಳಿಯ ಬಗ್ಗೆ ಪಟಪಟನೆ ಮಾಹಿತಿ ಬಿಚ್ಚಿಡುವ ಇವರು ನಮ್ಮ ಕುಲ, ಗೋತ್ರ, ವೃತ್ತಿ, ಕುಲದೇವರು ಸೇರಿದಂತೆ ಎಲ್ಲರ ಜಾತಕಗಳು ಇವರಿಂದ ದೊರೆಯುತ್ತವೆ. ಇವೆಲ್ಲವುಗಳ ಜತೆಗೆ ನಮ್ಮ ಪೂರ್ವಜರು ಎಲ್ಲಿಯವರು, ಮೂಲ ಅವರ ಕುಲ ಕಸುಬೇನು, ಮೂಲ ಅಡ್ಡಹೆಸರು, ಎಲ್ಲಿಂದ ಬಂದಿದ್ದಾರೆ. ಇಲ್ಲಿಗೆ ಬಂದು ಎಷ್ಟು ವರ್ಷಗಳಾಗಿವೆ. ಕುಟುಂಬದ ಮೂಲ ಪುರುಷರ್ಯಾರು, ಕುಲದೇವರ ಹೆಸರೇನು ಅವರ ಆಸ್ತಿಯ ವಿವರ ಎಷ್ಟೆಷ್ಟಿತ್ತು ಎಂಬ ಇತ್ಯಾದಿ ವಿವರಗಳನ್ನು ಸಂಬಂಧಿಸಿದ ವಂಶಾವಳಿಗಳಿಗೆ ಬಿತ್ತರಿಸುವುದೇ ಇವರ ಮೂಲ ಕಾಯಕ.
ಊರಿಂದೂರಿಗೆ ಅಲೆದಾಡುವ ಹೆಳವರು ಪ್ರತಿ ಮನೆತನದ ವಂಶಾವಳಿಯನ್ನು ತಮ್ಮ ಬೃಹದಾಕಾರವಾದ ಪುಸ್ಥಕದಲ್ಲಿ ಬರೆದಿಟ್ಟುಕೊಂಡಿರುತ್ತಾರೆ. ಆ ವಂಶಾವಳಿಯಲ್ಲಿನ ಸಮಗ್ರ ಮಾಹಿತಿಯನ್ನು ಸುರಕ್ಷಿತವಾಗಿ ಸಂರಕ್ಷಿಸುತ್ತಾರೆ. ಏಕೆಂದರೆ ಇದೇ ಇವರ ಆಧಾರಸ್ತಂಭ. ಸದ್ಯದ ಪೀಳಿಗೆ ಸದಸ್ಯರಿಗೆ ಅದನ್ನು ಹೇಳುತ್ತಾ ಅವರನ್ನೆಲ್ಲಾ ಒಂದು ಕ್ಷಣ ನೂರಾರು ವರ್ಷಗಳ ಹಿಂದಿನ ಕಾಲಕ್ಕೆ ಕರೆದೊಯ್ದು ಸಮಗ್ರ ಮಾಹಿತಿ ಬಿಚ್ಚಿಟ್ಟಾಗ ನಮ್ಮದು ಇಂತಹ ಇತಿಹಾಸ ಹೊಂದಿದೆಯಾ ಎಂದು ದಿಗ್ಭ್ರಾಂತರನ್ನಾಗುವಂತೆ ಮಾಡುತ್ತದೆ. ಈ ವೇಳೆ ಗೊತ್ತಿರದ ಎಷ್ಟೋ ವಿಷಯ, ಮಾಹಿತಿಗಳು, ಪೂರ್ವಜರ ಹಲವಾರು ಸಂಗತಿಗಳು ಕಣ್ಣಿಗೆ ಕಟ್ಟುತ್ತವೆ.
ದಾಖಲೆಗಳ ಸಂರಕ್ಷಣೆ: ದಾಖಲೆ ಹಾಗೂ ವಂಶಾವಳಿಗೆ ಸಂಬಂಧಿಸಿದ ಪುಸ್ತಕಗಳನ್ನು ತಮ್ಮ ಮನೆಗಳಲ್ಲಿ ವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ಕಾಯ್ದು ಸಂರಕ್ಷಿಸುವಲ್ಲಿ ಜವಾಬ್ದಾರಿ ವಹಿಸುವ ಇವರು 300ರಿಂದ 350 ವರ್ಷಗಳಿಂದಲೂ ಅತ್ಯಂತ ಜಾಗರೂಕತೆಯಿಂದ ದಾಖಲಾತಿ ಸಂರಕ್ಷಿಸಿಟ್ಟಿದ್ದಾರೆ. ಈ ರೀತಿ ವಂಶಾವಳಿ ಸಂರಕ್ಷಿಸಿಡುತ್ತಿರುವ ಹೆಳವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತಮ್ಮ ವೃತ್ತಿ ಮುನ್ನಡೆಸಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ.
ಸಹಾಯ ಹಸ್ತದ ಅವಶ್ಯಕತೆ ಇದೆ: ಇತ್ತೀಚಿನ ದಿನಗಳಲ್ಲಿ ಹೆಳವರು ಆಧುನಿಕತೆಗೆ ಹೊಂದಿಕೊಳ್ಳುತ್ತಿದ್ದು, ಕೆಲವರಿಗೆ ಅಗತ್ಯತೆಗನುಗುಣವಾಗಿ ಮಾಹಿತಿಯನ್ನು ದೂರವಾಣಿ ಮೂಲಕವು ನೀಡುತ್ತಾರೆ. ಕೆಲವರು ಪೂರ್ವಜರು ಸಂಗ್ರಹಿಸಿದ್ದ ಮಾಹಿತಿಯನ್ನು ಗಣಕಯಂತ್ರಗಳಲ್ಲಿ ಸಂಗ್ರಹಿಸಿಡುವ ವ್ಯವಸ್ಥೆ ನಡೆಸಿದ್ದಾರೆ. ಶೈಕ್ಷಣಿಕವಾಗಿ ಒತ್ತು ನೀಡುತ್ತಿರುವ ಇವರು ತಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಇತ್ತೀಚಿನ ದಿನಗಳಲ್ಲಿ ಅವರಲ್ಲಿ ತಮ್ಮ ವೃತ್ತಿಯ ಬಗ್ಗೆ ಕಾಳಜಿ ಕಡಿಮೆಯಾಗುತ್ತಿರುವುದು ಕಂಡು ಬರುತ್ತಿದೆ. ಅವರ ಆರ್ಥಿಕ ಸ್ಥಿತಿ ಸುಧಾರಿಸುವಂತೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಅವರಲ್ಲಿರುವ ಮಹತ್ವಪೂರ್ಣ ಮಾಹಿತಿಗಳ ಉಳಿವಿಗೆ ಪ್ರಚೋದನೆ ನೀಡಬೇಕಿದೆ.
ನಿಂಗರಾಜ ಬೇವಿನಕಟ್ಟಿ