ಮಕ್ಕಳ ಶಾಲಾ ಸೇರ್ಪಡೆ ಪಾಲಕರ ಜವಾಬ್ದಾರಿ: ನಾಗಪ್ಪ
ಕನ್ನಡಪ್ರಭ ವಾರ್ತೆ, ನರಗುಂದ, ಜೂ. 4
ಪ್ರತಿಯೊಂದು ಮಗು ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರದ್ದು, ಇದರಿಂದ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಪುರಸಭೆ ಸದಸ್ಯ ನಾಗಪ್ಪ ನವಲಗುಂದ ಹೇಳಿದರು.
ಈಚೆಗೆ ಅವರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 6 ಅಧ್ಯಾಪಕ ನಗರದಲ್ಲಿ 2013-14ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಪಾಲಕರು ನೋಡಿಕೊಳ್ಳಬೇಕು. ಇಂದಿನ ಆಧುನಿಕ ಭರಾಟೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡದೆ ಟಿ.ವಿ, ಮೊಬೈಲ್ಗಳ ಮೇಲೆ ಹೆಚ್ಚಿನ ಗಮನವನ್ನು ನೀಡುತ್ತಿದ್ದು, ಇದರಿಂದ ಮಕ್ಕಳಿಗೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚಾಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ಟಿ.ವಿ, ಮೊಬೈಲ್ ಬಳಕೆ ಕಡಿಮೆ ಮಾಡುವಂತೆ ಹಾಗೂ ಅವರನ್ನು ಹೆಚ್ಚಾಗಿ ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸುವಂತೆ ನೋಡಿಕೊಳ್ಳಬೇಕು.
ಅಂದಾಗ ಮಾತ್ರ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದರು.
ಮಹೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಬಿ.ಬಿ. ಧಾರವಾಡ, ಶಿಕ್ಷಕ ಕೆ.ಎಸ್. ದೊಡಮನಿ, ವಿದ್ಯಾಧರ ಬೋಗಾರ, ಸಿ.ಎಸ್. ಭಜಂತ್ರಿ, ಎಸ್.ಎ. ಹೊಸಮನಿ, ಎಸ್.ಎಸ್. ಪಾಟೀಲ, ಎಸ್.ಎ. ಶಿವಶಿಂಪಿಗೇರ ಉಪಸ್ಥಿತರಿದ್ದರು.