ವಿಜೃಂಭಣೆಯಿಂದ ನಡೆದ ಗಂಧದ ಮೆರವಣಿಗೆ
ನರೇಗಲ್ಲ: ಪಟ್ಟಣದ ರೆಹಮನ್ ಶಾವಲಿ ದರ್ಗಾದ ಉರೂಸ್ ಮಂಗಳವಾರ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಹಿಂದೂ, ಮುಸ್ಲಿಂ ಸಮಾಜದ ಮಹಿಳೆಯರು ದರ್ಗಾದ ಆವರಣದಲ್ಲಿರುವ ಲಕ್ಷ್ಮಿಮ್ಮನಿಗೆ ಉಡಿತುಂಬಿ, ಕರಿಗಡಬಿನ ಎಡೆ ಕೊಡುವ ಮೂಲಕ ಉರೂಸ್ಗೆ ಚಾಲನೆ ನೀಡಿದರು.
ಸಂಜೆ ವಿವಿಧ ವಾದ್ಯ ಮೇಳಗಳೊಂದಿಗೆ ದರ್ಗಾದ ರಹಿಮಾನ ಶಾವಲಿ ಅಜ್ಜನವರನ್ನು ರಥದಲ್ಲಿ ಕೂರಿಸಿ ಗಂಧದ ಮೆರವಣಿಗೆ ಮಾಡಲಾಯಿತು. ಚಿಕ್ಕ ಮಕ್ಕಳಿಂದ ಕೋಲಾಟ, ಹೆಜ್ಜೆ ಕುಣಿತ, ಡೊಳ್ಳು, ಕೊಡೆಯ ನೃತ್ಯ, ಗೀಗಿ ಪದ ಹಾಗೂ ಲಾವಣಿ ಪದ ಹಾಡುವ ತಂಡ, ಹೀಗೆ ವಿಭಿನ್ನ ರೀತಿಯ ನೃತ್ಯ ಮೆರವಣಿಗೆಗೆ ಮೆರಗು ನೀಡಿತು. ರಾತ್ರಿಯ ವೇಳೆ ನರೇಗಲ್ಲಿನಿಂದ ಎರಡು ಕಿಮೀ ದೂರದಲ್ಲಿರುವ ಕೋಚಲಾಪುರ ಗ್ರಾಮಕ್ಕೆ ಮೆರವಣಿಗೆ ಸಾಗಿತು. ಅಲ್ಲಿ ರಡ್ಡೇರ ಮನೆತನದವರು ಊಟದ ವ್ಯವಸ್ಥೆ ಮಾಡಿದ್ದರು.
ರಡ್ಡೇರ ಶಂಕರಗೌಡ್ರ ಮನೆಯವರು ಲಕ್ಷ್ಮಮ್ಮನ ಪಲ್ಲಕ್ಕಿಗೆ ಪೂಜೆ ನೆರವೇರಿಸುತ್ತಾರೆ. ಅಲ್ಲಿಂದ ಲಕ್ಷ್ಮಮ್ಮನ ಪಲ್ಲಕ್ಕಿಯನ್ನು ಮೆರವಣಿಗೆ ಮೂಲಕ ಸ್ಥಳೀಯ ದರ್ಗಾಕ್ಕೆ ತರುತ್ತಾರೆ.
ಅಷ್ಟೊತ್ತಿಗೆ ರಾತ್ರಿ 1 ಗಂಟೆಯಾಗುತ್ತದೆ. ಈ ಎಲ್ಲ ಕಾರ್ಯಗಳು ರಹಿಮಾನ ಶಾವಲಿ ಅಜ್ಜನವರ ಸಮ್ಮುಖದಲ್ಲಿಯೇ ನೆರವೇರುತ್ತವೆ. ಈ ಮೆರವಣಿಗೆಯಲ್ಲಿ ಭಕ್ತರು ತಮ್ಮ ತಮ್ಮ ಭಕ್ತಗನುಗುಣವಾಗಿ ಸೇವೆ ಸಲ್ಲಿಸುತ್ತಾರೆ.