ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹೆಸರು ಬೀಜ ಬಲು ದುಬಾರಿ

Mainashree
Updated On : 5 Jun 2013, 11:24 am

ಕನ್ನಡಪ್ರಭ ವಾರ್ತೆ, ನರಗುಂದ, ಜೂ. 4
ಜಿಲ್ಲೆಯಲ್ಲಿ ಅತಿ ಹೆಚ್ಚು ಕೃಷಿ ಅವಲಂಬಿತ ಪ್ರದೇಶವಾಗಿರುವ ನರಗುಂದ ತಾಲೂಕು. ಈ ತಾಲೂಕಿನ ರೈತ ಸಮುದಾಯವು 2 ವರ್ಷದಿಂದ ಸತತ ಭೀಕರ ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈ ವರ್ಷ ಮುಂಗಾರು ಮಳೆ ಉತ್ತಮವಾಗಿ ಬರುವ ವಾತಾವರಣ ಕಂಡು ಬಂದಿರುವುದರಿಂದ ರೈತನಿಗೆ ಮಾರುಕಟ್ಟೆಯಲ್ಲಿ ಮುಂಗಾರು ಹಂಗಾಮಿಗಾಗಿ ಬಿತ್ತಲು ಬೇಕಾಗುವ ಹೆಸರು ಬೀಜ ಖರೀದಿಸುತ್ತಿದ್ದು, ರೈತರು ಬಂದು ಹೆಸರು ಬೀಜದ ಬೆಲೆ ಕೇಳಿದರೆ ಸಾಕು ಮೂರ್ಛೆ ಹೋಗುವ ಪರಿಸ್ಥಿತಿ ಬಂದೊದಗಿದೆ.
ಬೀಜದ ಅಭಾವ
ಈ ಭಾಗದಲ್ಲಿ ಕಳೆದೆರಡು ವರ್ಷದಿಂದ ಭೀಕರ ಬರ ಬಿದ್ದ ಹಿನ್ನೆಲೆಯಲ್ಲಿ ಮುಂಗಾರು ಬೆಳೆಯಾದ ಹೆಸರು ಬಿತ್ತನೆ ಕಾರ್ಯವನ್ನು ಇಲ್ಲಿನ ರೈತರು ಈವರೆಗೂ ಮಾಡಿಲ್ಲ. ಪ್ರಸಕ್ತ ವರ್ಷ ಮುಂಗಾರು ಮಳೆ ವಾಡಿಕೆಯಂತೆ ಮೇ ತಿಂಗಳಲ್ಲಿಯೇ ಕೃಪೆ ತೋರಿದ ಹಿನ್ನೆಲೆಯಲ್ಲಿ 2 ವರ್ಷದಿಂದ ಬರಗಾಲಕ್ಕೆ ಬೆಂದು ಹೋಗಿದ್ದ ರೈತನಿಗೆ ತಾಲೂಕಾದ್ಯಂತ ರೋಹಿಣಿ ಮಳೆ ಕೃಪೆಯಿಂದ ರೈತರ ಮೊಗದಲ್ಲಿ ಹರ್ಷವುಂಟಾಗಿದೆ. ರೈತರು ತಮ್ಮ ಜಮೀನುಗಳನ್ನು ಬಿತ್ತನೆಗೆ ಹದಮಾಡಿಕೊಂಡಿದ್ದಾರೆ. ಇಂತಹ ಸಂದರ್ಭ ರೋಹಿಣಿ ಮಳೆ ಹೋಗುವುದರೊಳಗೆ ಹೆಸರು ಬಿತ್ತನೆ ಮಾಡಬೇಕೆಂದರೆ ಮಾರುಕಟ್ಟೆಯಲ್ಲಿ ಹೆಸರು ಬೀಜದ ಬೆಲೆ ಗಗನಕ್ಕೇರಿದ್ದು, ಅಷ್ಟು ಬೆಲೆ ನೀಡಿ ಹೇಗೆ ಬೀಜ ಖರೀದಿಸಬೇಕು ಎಂಬ ಚಿಂತೆ ರೈತ ಸಮೂಹವನ್ನು ಕಾಡುತ್ತಿದೆ.
ಸಂಕಷ್ಟದಲ್ಲಿ ರೈತರು
ಬರಗಾಲದ ಹಿನ್ನೆಲೆಯಲ್ಲಿ ರೈತರ ಕೈಯಲ್ಲಿ ಪುಡಿಗಾಸು ಇಲ್ಲದ ಪರಿಸ್ಥಿತಿಯಿದ್ದು, ಇಂತಹ ಸಂದರ್ಭ ಹೆಚ್ಚು ಬೆಲೆ ನೀಡಿ ಹೇಗೆ ಖರೀದಿಸಬೇಕು ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಮೇಲಾಗಿ ಪ್ರಸಕ್ತ ಈ ಭಾಗದ ರೈತರು ಮಾರುಕಟ್ಟೆಯಲ್ಲಿ ಅಥವಾ ಕೃಷಿ ಕೇಂದ್ರದಲ್ಲಿ ಹೆಸರು ಬೀಜ ಖರೀದಿಸುವ ಅನಿವಾರ್ಯತೆ ಬಂದೊದಗಿದೆ. ರೈತ ಸಾಲ ಮಾಡಬೇ       ಕಾಗಿದೆ.
ಸಾಲ ಮಾಡಿ ಬಿತ್ತನೆಗೆ ಸಿದ್ಧತೆ
ಕಳೆದೆರಡು ವರ್ಷದಲ್ಲಿ ಉಂಟಾಗಿದ್ದ ಬರಗಾಲ ಸಂದರ್ಭದಲ್ಲಿ ರೈತರು ಮಳೆರಾಯನನ್ನು ನಂಬಿ ಸಾಲ, ಸೋಲ ಮಾಡಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದರು. ಆದರೆ, ಅಗತ್ಯಕ್ಕೆ ತಕ್ಕಂತೆ ಮಳೆಯಾಗದ ಹಿನ್ನೆಲೆಯಲ್ಲೂ ರೈತರು ಹಾಕಿದ ಬೀಜ ಮೊಳಕೆಯೊಡೆಯುವ ಮೊದಲೆ ಕಮರಿ ಹೋಗಿತ್ತು. ಇದರಿಂದಾಗಿ ರೈತರು ಸಾಲ, ಸೋಲ ಮಾಡಿ ಹಾಕಿದ ಬೀಜದ ಖರ್ಚು ದೊರಕಿಲ್ಲ. ಈಗ ಮತ್ತೆ ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು, ಮೊದಲೆ ರೈತನ ಕೈಯಲ್ಲಿ ಕಾಸಿಲ್ಲ.
 ಈಗ ಮುಂಗಾರಿ ಬಿತ್ತನೆ ಬೀಜದ ಖರೀದಿಗಾಗಿ ಅಲ್ಲಿ-ಇಲ್ಲಿ ಸಾಲಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಏನೇ ಆಗಲಿ ಈ ಬಾರಿ ಸಾಲ ಮಾಡಿಯಾದರೂ ಬೀಜ ಖರೀದಿಸಿ ಹೊಲಕ್ಕೆ ಉಳುಮೆ ಮಾಡಿ ಉತ್ತಮ ಫಸಲು ತೆಗೆಯಬೇಕು ಎಂಬ ಆಸೆಯನ್ನಿಟ್ಟುಕೊಂಡಿರುವ ರೈತ ಉಳ್ಳವರ ಹತ್ತಿರ ಸಾಲ ಮಾಡಿ ಬೀಜ ಖರೀದಿ ಮಾಡಿಕೊಳ್ಳುತ್ತಿದ್ದಾನೆ.

 ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement