ಮಣಿಪಾಲ ಆಸ್ಪತ್ರೆ: ಆರೋಗ್ಯ ಕಾರ್ಡ್ ಸ್ಕೀಂ ಆರಂಭ
ಕನ್ನಡಪ್ರಭ ವಾರ್ತೆ, ಗದಗ, ಜೂ. 6
ಏಪ್ರಿಲ್ 13ರಿಂದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಗೆ ಮಣಿಪಾಲ ವಿವಿಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ ಚಾಲನೆ ನೀಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದು ಮಣಿಪಾಲ ಆಸ್ಪತ್ರೆಯ ಮಾರುಕಟ್ಟೆಯ ವ್ಯವಸ್ಥಾಪಕ ನಿರ್ದೇಶಕ ಮೋಹನ್ ಶೆಟ್ಟಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದೇಶದಲ್ಲಿ ವಿಮೆರಹಿತ ಹಾಗೂ ಸರ್ಕಾರೇತರ ಸಂಸ್ಥೆಯಿಂದ ಕಾರ್ಡ್ ಕೊಡಲ್ಪಡುತ್ತಿರುವ ಆರೋಗ್ಯ ಭಾಗ್ಯ ಯೋಜನೆ, ಮಣಿಪಾಲ ವಿವಿಯ ಸಾಮಾಜಿಕ ಕಳಕಳಿಯ ಪ್ರತೀಕ ಮಣಿಪಾಲ ಆರೋಗ್ಯ ಕಾರ್ಡ್. ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ವಯಸ್ಸಿನ ಕಟ್ಟುಪಾಡು ಇಲ್ಲದೇ ಹುಟ್ಟು ಅಂಗವಿಕಲತೆ ಸಹಿತ ಎಲ್ಲ ತರದ ರೋಗ ಉಳ್ಳವರಿಗೂ ಕೊಡಲ್ಪಡುತ್ತಿರುವ ಮಣಿಪಾಲ ಆರೋಗ್ಯ ಸಂಸ್ಥೆಯ ಏಕಮಾತ್ರ ಕೊಡುಗೆಯಾಗಿದೆ ಎಂದರು.
ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವ ರೋಗಿಗಳು ಕರಾವಳಿ ಭಾಗದಲ್ಲಿ ಸೇವೆ ಕೊಡುತ್ತಿರುವ ಮಣಿಪಾಲ ಹೆಲ್ತ್ ಎಂಟರ್‌ಪ್ರೈಜಿಸ್‌ನ ವಿವಿಧ ಆಸ್ಪತ್ರೆಗಳಲ್ಲಿ ಒಳರೋಗಿ ಮತ್ತು ಹೊರರೋಗಿ ಸೇವೆಗಳಲ್ಲಿ ವಿವಿಧ ರೀತಿಯ ರಿಯಾಯ್ತಿಗಳನ್ನು ಪಡೆಯಬಹುದಾಗಿದೆ. ವೈದ್ಯಕೀಯ ಅಧೀಕ್ಷಕರು ಅವರೇ ಯಾರೇ ಆದರೂ ಕೂಡ ಒಂದು ಸಣ್ಣ ಮೊತ್ತವನ್ನು ಕೊಟ್ಟು ಈ ಕಾರ್ಡ್‌ನ ಸದಸ್ಯತ್ವವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ವ್ಯಯಿಸಿದ ಹಣದ ಮೊತ್ತವನ್ನು 2-3 ಬಾರಿ ಕಾರ್ಡ್ ಬಳಸುವುದರಿಂದ ಹಿಂದಕ್ಕೆ ಪಡೆಯಬಹುದಾಗಿದೆ. ಪ್ರಾರಂಭವಾಗಿರುವ ಈ ಅಭಿಯಾನವು ಜೂ. 30ಕ್ಕೆ ಕೊನೆಗೊಳ್ಳಲಿದೆ. ಈ ಕಾರ್ಡ್ ಹೊಂದಿರುವ ರೋಗಿಗಳು ಯಾವುದೇ ನುರಿತ ತಜ್ಞರು ಅಥವಾ ವಿಶೇಷ ಪರಿಣಿತ ತಜ್ಞರನ್ನು ಶೇ. 50ರಷ್ಟು ಸಂದರ್ಶನ ಶುಲ್ಕ ರಿಯಾಯ್ತಿಯೊಂದಿಗೆ 1 ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಸಂದರ್ಶಿಸಬಹುದಾಗಿರುವುದು ಈ ಕಾರ್ಡ್‌ನ ವಿಶೇಷತೆಯಾಗಿದೆ. ಅಲ್ಲದೇ ಶೇ. 20ರಷ್ಟು ರಿಯಾಯ್ತಿ ದರದಲ್ಲಿ ಎಲ್ಲ ತರದ ಪ್ರಯೋಗಾಲಯ ಪರೀಕ್ಷೆಗಳ ಪ್ರಯೋಜನ ಪಡೆಯಬಹುದು. ಅಲ್ಲದೇ ಕಸ್ತೂರಬಾ ಆಸ್ಪತ್ರೆಯ ಔಷಧಾಲಯದಲ್ಲಿ ಈ ಕಾರ್ಡ್ ಹೊಂದಿರುವ ರೋಗಿಗಳು ವೈದ್ಯರು ನೀಡಿದ ಔಷಧಿ ಚೀಟಿ ತೋರಿಸಿ ಪಡೆಯುವ ಎಲ್ಲ ಔಷಧಗಳ ಬೆಲೆಗಳಲ್ಲಿ ಶೇ. 10ರಷ್ಟು ರಿಯಾಯ್ತಿ ಪಡೆಯಬಹುದಾಗಿದೆ. ಎಲ್ಲ ಒಳರೋಗಿ ವಿಭಾಗದ ಸೇವಾ ಶುಲ್ಕದಲ್ಲಿ ಶೇ. 25ರಷ್ಟು ರಿಯಾಯ್ತಿ ನೀಡಲಾಗುತ್ತದೆ. ಈ ಕಾರ್ಡ್ ಹೊಂದಿದವರು ಕಸ್ತೂರಬಾ ಆಸ್ಪತ್ರೆ ಮಣಿಪಾಲ, ಮಣಿಪಾಲ ದಂತ ವೈದ್ಯಕೀಯ ಕಾಲೇಜು ಮಂಗಳೂರು, ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಮಣಿಪಾಲ ದಂತವಿಜ್ಞಾನ ಕಾಲೇಜು ಮಣಿಪಾಲ, ಕೆಎಂಸಿ ಮಂಗಳೂರು, ಕೆಎಂಸಿ ಅತ್ತಾವರ ಈ 7 ಕಡೆಗಳಲ್ಲಿ ಈ ಮಣಿಪಾಲ ಆರೋಗ್ಯ ಕಾರ್ಡ್‌ನ್ನು ಉಪಯೋಗಿಸಬಹುದಾಗಿದೆ. ಈ ಕಾರ್ಡ್ ಹೊಂದಿದ ರೋಗಿಗಳು ಯಾವುದೇ ತರಹದ ಕಾಯಿಲೆಯನ್ನು ಈ ಕಾರ್ಡ್‌ನ ಸದಸ್ಯರಾಗುವ ಮೊದಲೇ ಹೊಂದಿದ್ದರೂ ಎಲ್ಲ ಚಿಕಿತ್ಸಾ ವೆಚ್ಚಗಳಲ್ಲಿ ರಿಯಾಯ್ತಿ ಪಡೆಯಬಹುದಾಗಿದೆ. ಈ ಕಾರ್ಡ್‌ನ್ನು ವೈಯಕ್ತಿಕವಾಗಿ ವರ್ಷಕ್ಕೆ ರು. 250ರಂತೆ ಕುಟುಂಬದ ಸದಸ್ಯರಿಗೆ 500 ದರದಲ್ಲಿ ನೀಡಲಾಗುತ್ತದೆ. 2013ನೇ ಸಾಲಿನ ಈ ಕಾರ್ಡ್‌ನ ಸದಸ್ಯತ್ವ ಪಡೆಯುವ ಅರ್ಜಿಗಳು ಸಿಂಡಿಕೇಟ್ ಬ್ಯಾಂಕ್‌ಗಳಲ್ಲಿ ದೊರೆಯುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.
ಮಣಿಪಾಲ್ ಆಸ್ಪತ್ರೆಯ ಅಭಿವೃದ್ಧಿ ಪ್ರತಿನಿಧಿ ಬಾಬ್ ಜಸ್ತನ್ ಸುದ್ದಿಗೋಷ್ಠಿಯಲ್ಲಿ ಇದ್ದರು.