ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಜೂ. 6
ನಗರದ ಹಳೆಬಸ್ ನಿಲ್ದಾಣದಿಂದ ಕೆ.ಎಚ್. ಪಾಟೀಲ ಪುತ್ಥಳಿ ವರೆಗೆ ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಗೊಳಿಸದ ನಗರಸಭೆ ಆಡಳಿತದ ವರ್ತನೆಯನ್ನು ವಿರೋಧಿಸಿ ವ್ಯಾಪಾರಸ್ಥರು, ಪ್ರಯಾಣಿಕರು ಹಾಗೂ ಪಾದಚಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಈಚೆಗೆ ಸುರಿದ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದೆ. ಸಿಮೆಂಟ್ ಬ್ರಿಕ್ಸ್‌ನಿಂದ ನಿರ್ಮಿಸಿರುವ ಈ ರಸ್ತೆಯು ಮಳೆಯ ನೀರಿನಿಂದ ಕುಸಿದಿದ್ದು, ಅಲ್ಲಲ್ಲಿ ತಗ್ಗು-ದಿನ್ನೆಗಳು ಬಿದ್ದಿವೆ. ಪದೇ ಪದೇ ರಸ್ತೆಯೂ ಹದಗೆಡುತ್ತಿರುವುದರಿಂದ ಇಲ್ಲಿನ ವ್ಯಾಪಾರಸ್ಥರಿಗೆ, ವಾಹನ ಸಂಚಾರರಿಗೆ, ಪ್ರಯಾಣಿಕರಿಗೆ ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ನಗರಸಭೆ ಎಂಜಿನಿಯರ್ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಬಳಿಕ ನಗರಸಭೆ ಪೌರಾಯುಕ್ತ ನಡುವಿನಮನಿ ಸ್ಥಳಕ್ಕೆ ಆಗಮಿಸಿ ರಸ್ತೆಯನ್ನು ಶೀಘ್ರದಲ್ಲಿಯೇ ದುರಸ್ತಿಗೊಳಿಸಿ ಗುಣಮಟ್ಟದ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು. ವೈಜನಾಥ ಕೌತಾಳ, ಸಂಗನಗೌಡ ಪಾಟೀಲ, ಲುಕ್ಕಣಸಾ ರಾಜೋಳಿ, ರಫೀಕ, ಕೃಷ್ಣಾ ಪರಡೇಕರ, ಶ್ಯಾವಿ ಮುಂತಾದವರು ಇದ್ದರು.