ಸುದ್ದಿ ಸಂಕ್ಷೇಪ
ನೋಡ್ತಾ ಇರಿ,ಏನೇನು ಮಾಡಿಸ್ತೀನಿ
ವಿಧಾನಸಭೆ: ದುಡಿಮೆ ಎಲ್ಲರ ಹಕ್ಕು, ಅದನ್ನು ನೀವು ಇದ್ದಾಗ ಏಕೆ ಮಾಡಲಿಲ್ಲ? ಪ್ರತಿ ಪಂಚಾಯಿತಿಗೊಬ್ಬ ಎಂಜಿನಿಯರ್ ಇದ್ದರೆ ಎಲ್ಲ ಆಗುತ್ತೆ ಅಲ್ವಾ? ಇದನ್ನು ಎಲ್ಲರೂ ಸೇರಿಕೊಂಡು ನಿರ್ಣಯಿಸಿ... ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಪ್ರತಿಪಕ್ಷ ನಾಯಕರು ಹಾಗೂ ಸರ್ಕಾರಕ್ಕೆ ತಾಕೀತು ಮಾಡಿದ ರೀತಿ ಇದು. ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದಾಗ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಹೆಚ್ಚಿನವರಿಗೆ ಕೆಲಸ ನೀಡಲಾಗುತ್ತಿಲ್ಲ. ಹೀಗಾಗಿ ಜನರಿಗೆ ಹೆಚ್ಚು ಕೆಲಸ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, 'ನೀವು ಸಿಎಂ ಆಗಿದ್ದಾಗ ಏಕೆ ಮಾಡಲಿಲ್ಲ. ನೀವು 15 ಸಾವಿರ ಕೋಟಿ ಬಳಸಿಕೊಳ್ಳುವ ಬದಲು 2 ಸಾವಿರ ಕೋಟಿ ಮಾತ್ರ ಉಪಯೋಗಿಸಿಕೊಂಡಿರಿ. ಪ್ರತಿ ಪಂಜಾಯಿತಿಗೂ ಒಬ್ಬ ಎಂಜಿನಿಯರ್ ಇದ್ದರೆ ಸರಿಹೋಗುತ್ತಲ್ವಾ? ನಿಮಗೆ ಎಷ್ಟು ಜನ ಎಂಜಿನಿಯರ್ ಬೇಕೋ, ಸಿಗುತ್ತಾರೆ. ನೀವೆಲ್ಲರೂ ಸೇರಿಕೊಂಡು ಒಂದು ನಿರ್ಣಯ ಮಾಡಿ. ಪ್ರತಿ ಪಂಚಾಯಿತಿಗೆ ಒಬ್ಬ ಎಂಜಿನಿಯರ್ ನೀಡಿ' ಎಂದರು. 'ಪ್ರತಿ ತಾಲೂಕಿಗೇ ಒಬ್ಬ ಎಂಜಿನಿಯರ್ ಇಲ್ಲ. ಇನ್ನು ಪಂಚಾಯಿತಿಗೆ ಒಬ್ಬ ಎಂಜಿನಿಯರ್ ಎಲ್ಲಿಂದ ಬರಬೇಕು?' ಎಂದು ಮಾಗಡಿ ಶಾಸಕ ಬಾಲಕೃಷ್ಣ ಪ್ರಶ್ನಿಸಿದರು. 'ಈ ಸರ್ಕಾರದಿಂದ ಮಾಡಿಸ್ತೀನಿ ನೋಡಿ' ಎಂದು ಸ್ಪೀಕರ್ ಹೇಳಿದರು. 'ಆಗಲ್ಲಾ ಬಿಡಿ, ಅವರು ನೇಮಿಸೊಲ್ಲ' ಎಂದರು ಬಾಲಕೃಷ್ಣ. 'ನೋಡ್ತಾ ಇರಿ, ಮಾಡಿಸ್ತೀನಿ' ಎಂದು ಸ್ಪೀಕರ್ ಮತ್ತೊಮ್ಮೆ ನುಡಿದರು.
ಸಹಿ ಹಾಕಿ ಹೊರಟು ಹೋಗ್ಲಾ?
ಮೂವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಆ ಕಡೆ ಕೆಲವರು ಬಿಟ್ಟರೆ ಬೇರೆ ಯಾರಿಗೂ ಇಲ್ಲಿ ಮಾತನಾಡಲು ಅವಕಾಶವೇ ಇಲ್ಲ. ಸದನಕ್ಕೆ ಬಂದು ಸಹಿ ಮಾಡಿ ಹೊರಟು ಹೋಗಲಾ...? ಹೀಗೆಂದು ಪ್ರಶ್ನಿಸಿದರು ಭಟ್ಕಳದ ಪಕ್ಷೇತರ ಶಾಸಕ ಮಂಕಾಳ ವೈದ್ಯ. 'ನಾನೂ ಮೂರು ದಿನದಿಂದ ನೋಡುತ್ತಿದ್ದೇನೆ. ಅಲ್ಲಿರುವವರಿಗೇ ಗಂಟೆಗಟ್ಟಲೆ ಅವಕಾಶ ನೀಡುತ್ತಿದ್ದೀರಿ. ನಾವು ಮಾತನಾಡೋದು ಬೇಡವಾ? ಹೊಸದಾಗಿ ಬಂದಿದ್ದೇವೆ. ನಮಗೂ ಮಾತನಾಡಲು ಅವಕಾಶ ಕೊಡಿ. ಕೊಡದಿದ್ದರೆ ನಾನು ಹೊರಟು ಹೋಗುತ್ತೇನೆ' ಎಂದು ಮಾಂಕಾಳ ವೈದ್ಯ ಅವರು ಸ್ಪೀಕರ್ ಅವರಿಗೆ ಕೇಳಿದರು. 'ಎಲ್ಲರಿಗೂ ಅವಕಾಶ ಕೊಡುತ್ತೇನೆ. ಹೀಗೆಲ್ಲ ಮಾತನಾಡಬೇಡಿ' ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸಮಾಧಾನಪಡಿಸಿದರು.
18ಕ್ಕೆ ಜಿಪಂ ಸಾಮಾನ್ಯ ಸಭೆ
ಗದಗ: ಜಿಪಂ ಸಾಮಾನ್ಯ ಸಭೆ ಜೂ. 18ರ ಬೆಳಗ್ಗೆ 11.30ಕ್ಕೆ ಜಿಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.