100ಕ್ಕೂ ಹೆಚ್ಚು ಮುಂಗಟ್ಟು ತೆರವು
ಹುಬ್ಬಳ್ಳಿ: ಫುಟ್ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಮುಂದುವರಿಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಶುಕ್ರವಾರ ನಗರದ ಪ್ರಮುಖ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿದರು.
ಕೊಪ್ಪಿಕರ ರಸ್ತೆ, ಕೋಯಿನ್ ರಸ್ತೆ, ಸ್ಟೇಶನ್ ರಸ್ತೆ, ಮರಾಠಾ ಗಲ್ಲಿ, ಬಾರದಾನಸಾಲ, ಮ್ಯಾದರ ಓಣಿಗಳಲ್ಲಿ ಕಾರ್ಯಾಚರಣೆ ನಡೆಸಿ, ಫುಟ್ಪಾತ್ ಅತಿಕ್ರಮಣ ತೆರವುಗೊಳಿಸಿದರು.
'ಕನ್ನಡಪ್ರಭ' ಪ್ರಕಟಿಸಿದ 'ಫುಟ್ಪಾತ್ ಹೈಜಾಕ್' ಸರಣಿ ವಿಶೇಷ ವರದಿಗೆ ಸ್ಪಂದಿಸಿ ಫುಟ್ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಪ್ರಾರಂಭಿಸಿರುವ ಪಾಲಿಕೆ ಅಧಿಕಾರಿಗಳಿಂದಾಗಿ ಈಗಾಗಲೇ ದಾಜಿಬಾನಪೇಟ, ಸ್ಟೇಶನ್ ರಸ್ತೆ, ಚನ್ನಮ್ಮ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಫುಟ್ಪಾತ್ಗಳು ಅತಿಕ್ರಮಣದಿಂದ ತೆರವುಗೊಂಡಿವೆ. ಇದರಿಂದಾಗಿ ಪಾದಚಾರಿಗಳು ರಸ್ತೆ ಮೇಲೆ ತಿರುಗಾಡದೇ ಫುಟ್ಪಾತ್ ಬಳಸುತ್ತಿರುವುದರಿಂದ ವಾಹನ ಸಂಚಾರವೂ ಸರಳಗೊಂಡಿದೆ. ಶುಕ್ರವಾರ ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು, ಫುಟ್ಪಾತ್ ಮೇಲಿಟ್ಟಿದ್ದ ತರಕಾರಿ, ಡಬ್ಬಾ ಅಂಗಡಿ, ಹೊಲಿಗೆ ಯಂತ್ರ, ನಾಮಫಲಕ ಸೇರಿದಂತೆ ನೂರಾರು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಫುಟ್ಪಾತ್ ಮೇಲೆ ಬಟ್ಟೆಗಳನ್ನು ತೂಗುಬಿಟ್ಟು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಮಾಡಿದ್ದ ಬಟ್ಟೆ ಅಂಗಡಿಯ ವಸ್ತ್ರಗಳನ್ನೂ ಪಾಲಿಕೆ ಸಿಬ್ಬಂದಿ ವಶಪಡಿಸಿಕೊಂಡರು.
100ಕ್ಕೂ ಹೆಚ್ಚು ಅಂಗಡಿಗಳ ಎದುರಿನ ಫುಟ್ಪಾತ್ನ್ನು ಪಾಲಿಕೆ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು. ಫುಟ್ಪಾತ್ ಅತಿಕ್ರಮಣ ತೆರವುಗೊಳಿಸುತ್ತಿದ್ದಂತೆಯೇ ಕೆಲ ವ್ಯಾಪಾರಸ್ಥರು ಮುಂಜಾಗ್ರತೆಯಿಂದ ಫುಟ್ಪಾತ್ ಮೇಲೆ ಮಾರಾಟಕ್ಕಿಟ್ಟಿದ್ದ ವಸ್ತುಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿದರು. ಕಾರ್ಯಾಚರಣೆ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.