ಅಧಿಕಾರ ದುರ್ಬಳಕೆ: ಅವ್ಯವಹಾರದ ಆರೋಪ
ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಪಕ ಶ್ರೀಧರ ಬಡಿಗೇರ ಎಂಬುವವರು ಸರ್ವಾಧಿಕಾರಿ ಧೋರಣೆಯಿಂದ ನಡೆದುಕೊಳ್ಳುತ್ತಿದ್ದಾರೆ. ಶಾಲೆಯ ಯಾವ ಸಿಬ್ಬಂದಿಯೊಂದಿಗೂ ಸೌಜನ್ಯದಿಂದ ವರ್ತಿಸುತ್ತಿಲ್ಲ. ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಶಾಲೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ್ದಲ್ಲದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಹಾಗೂ ಕ್ಷೇತ್ರದ ತಾಪಂ ಸದಸ್ಯ ಟಿ.ಬಿ. ಅಳವಂಡಿ ಲಿಖಿತವಾಗಿ ಹೇಳಿಕೆ ನೀಡಿ ಗಂಭೀರ ಆರೋಪ ಮಾಡಿದ್ದಾರೆ.
ಶಾಲೆಯ ಶಿಕ್ಷಕ ಕೆ.ಜಿ. ಅಶೋಕ ಎಂಬುವವರು ವೈದ್ಯಕೀಯ ರಜೆಯ ಮೇಲಿದ್ದ ಸಮಯ ಸರ್ಕಾರದ ನಿಯಮ ಪರಿಗಣಿಸದೇ ತಮ್ಮ ಅಧಿಕಾರ ದುರ್ಬಳಕೆ ಮಾಡಿ ಅವರಿಗೆ ವೇತನ ಬಟವಡೆ ಮಾಡಿರುವುದಾಗಿ ಆರೋಪಿಸಿದ್ದಾರೆ.
ಬಿಸಿಯೂಟ ಯೋಜನೆಯಲ್ಲಿ ಪೂರೈಕೆಯಾದ ಅಕ್ಕಿ, ಬೇಳೆ ಮತ್ತಿತರ ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಮಕ್ಕಳ ಬಿಸಿಯೂಟಕ್ಕೂ ಸಂಚಕಾರವೊಡ್ಡಿದ್ದಾರೆ. ಈ ಕುರಿತು ಅನೇಕ ಬಾರಿ ಮುಖ್ಯಾಧ್ಯಾಪಕರ ಗಮನಕ್ಕೆ ತಂದರೂ ಲೆಕ್ಕಿಸದೇ ತಮ್ಮ ಕಾರ್ಯ ಮುಂದುವರೆಸಿದ್ದಾರೆ.
ಶಾಲೆ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಹಾಗೂ ಮಕ್ಕಳ ಜ್ಞಾನ ಹೆಚ್ಚಳಕ್ಕೆ ಸರ್ಕಾರ ನೀಡಿದ ಕಂಪ್ಯೂಟರ್ಗಳ ಬಿಡಿ ಭಾಗಗಳನ್ನು ಮಾರಾಟ ಮಾಡಿಕೊಂಡಿದ್ದಾರೆ.
ಶಾಲೆಯಲ್ಲಿ ಇಷ್ಟೆಲ್ಲ ಅವ್ಯವಹಾರ ನಡೆದರೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಾಗಲಿ ಬಿಸಿಯೂಟ ಯೋಜನೆಯ ಅಧಿಕಾರಿಗಳಾಗಲಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದು ಸಂಶಯಕ್ಕೆ ಕಾರಣವಾಗಿದೆ.
ಇನ್ನಾದರೂ ಅಧಿಕಾರಿಗಳು ಭೇಟಿ ನೀಡಿ ಅವ್ಯವಹಾರ ನಡೆದಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ಪ್ರಾಚಾರ್ಯರ ವಿರುದ್ಧ ಸೂಕ್ತಕ್ರಮ ತೆಗೆದುಕೊಳ್ಳಬೇಕು ಎಂದು ಟಿ.ಬಿ. ಅಳವಂಡಿ ಆಗ್ರಹಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ, ಬೆಳ್ಳಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಅವ್ಯವಹಾರದ ಕುರಿತು ಯಾವುದೇ ದೂರುಗಳು ಬಂದಿರುವುದಿಲ್ಲ. ಶಾಲೆಗೆ ತೆರಳಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ತಪ್ಪು ಕಂಡು ಬಂದಲ್ಲಿ ಮೇಲಧಿಕಾರಿಗಳಿಗೆ ಕ್ರಮಕ್ಕೆ ವರದಿ ನೀಡುವುದಾಗಿ ತಿಳಿಸಿದ್ದಾರೆ.