ಬಿಸಿಯೂಟ ಯೋಜನೆ: ಅವ್ಯವಹಾರದ ಆರೋಪ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜೂ. 7
ಬೇಸಿಗೆ ರಜೆಯಲ್ಲಿ ಮತ್ತು ಬರಗಾಲ ಪೀಡಿತ ಜಿಲ್ಲೆಯ ಮಕ್ಕಳಿಗೆಂದೇ 2 ತಿಂಗಳಿನಿಂದ ಪ್ರಾರಂಭಿಸಿದ ಬಿಸಿಯೂಟ ಯೋಜನೆ ಕಾರ್ಯಕ್ರಮ ಯಶಸ್ವಿ ಕಾಣದೇ ತಾಲೂಕಿನಲ್ಲಿ ಭಾರೀ ಪ್ರಮಾಣದ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಇದಕ್ಕೆ ತಾಲೂಕು ಮಟ್ಟದ ಅಕ್ಷರ ದಾಸೋಹ ಅಧಿಕಾರಿ ಕೆ.ಎ. ಬಳಿಗೇರ ಅವರ ಏಕಪಕ್ಷೀಯ ವರ್ತನೆಯೇ ಕಾರಣ ಎಂದು ತಾಪಂ ಸರ್ವ ಸದಸ್ಯರು ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.
ಶುಕ್ರವಾರ ತಾಪಂ ಸಭಾಭವನದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿ ವಿರುದ್ಧ ಹರಿಹಾಯ್ದ ಸದಸ್ಯರು, ಕಳೆದ 2 ತಿಂಗಳಲ್ಲಿ ಮಂಜೂರಾದ ಒಟ್ಟು ಆಹಾರ ಧಾನ್ಯವೆಷ್ಟು ? ಯಾವ ಶಾಲೆಗೆ ಎಷ್ಟು ಹಂಚಿಕೆ ಮಾಡಲಾಗಿದೆ. ಉಳಿದ ಆಹಾರ ಎಲ್ಲಿ ಶೇಖರಣೆ ಮಾಡಿದ್ದೀರಿ ಎಂದು ಕೇಳಿದಾಗ ಅಧಿಕಾರಿ ಅಪೂರ್ಣ ಮಾಹಿತಿಯೊಂದಿಗೆ ಸಭೆಗೆ ಆಗಮಿಸಿದ್ದು, ಮುಂದಿನ ಸಭೆಯಲ್ಲಿ ಮಾಹಿತಿ ನೀಡುವುದಾಗಿ ಹೇಳುತ್ತಿದ್ದಂತೆ ಭಾರೀ ಪ್ರಮಾಣದ ಆಹಾರಧಾನ್ಯ ಕಾಳಸಂತೆಯಲ್ಲಿ ಮಾರಾಟವಾಗಿದೆ ಎಂದು ಸದಸ್ಯ ಕೋಟೆಪ್ಪ ವರ್ದಿ, ಚನ್ನಪ್ಪ ಜಗಲಿ ಗಂಭೀರ ಆರೋಪ ಮಾಡಿದರು.
ಗಮನಕ್ಕೆ ತರದೆ ಯಾದಿ ಸಿದ್ಧ: ತಾಪಂ ಸದಸ್ಯರ ಗಮನಕ್ಕೆ ತರದೇ ಅಂದಾಜು ರು. 1 ಕೋಟಿ ವೆಚ್ಚದಲ್ಲಿ ಅಕ್ಷರ ದಾಸೋಹ ಅಧಿಕಾರಿ ಕೆ.ಎ. ಬಳಿಗೇರ ತಾವೇ ಕ್ರಿಯಾಯೋಜನೆ ಸಿದ್ದಪಡಿಸಿಕೊಂಡು ತಾಲೂಕಿನಲ್ಲಿನ 16 ಸರ್ಕಾರಿ 15 ಅನುದಾನಿತ ಪ್ರೌಢಶಾಲೆಗಳಿಗೆ ಅಡುಗೆ ಕೋಣೆ ಯಾದಿಯನ್ನು ಸಿದ್ಧಪಡಿಸಿಕೊಂಡು ಹಂಚಿಕೆ ಮಾಡಿದ್ದಾರೆ. ಇದನ್ನು ಶುಕ್ರವಾರ ಸಭೆಯ ಗಮನಕ್ಕೆ ತಂದಾಗ ಬಹುತೇಕ ಸದಸ್ಯರು ಬಿಸಿಯೂಟದ ಅಧಿಕಾರಿ ವಿರುದ್ಧ ಆಕ್ರೋಶಗೊಂಡು ನೀವೆ ಯಾದಿ ಸಿದ್ಧಪಡಿಸುವುದಾದರೆ ತಾಪಂ ಸದಸ್ಯರಾಗಿ ನಾವೇಕೆ ಇರಬೇಕು ಎಂದು ಖಾರವಾಗಿ ಪ್ರಶ್ನಿಸಿದರು. ಅದಕ್ಕೆ ಸಬೂಬ ಹೇಳಲು ಪ್ರಯತ್ನಿಸಿದಾಗ, ಸಿಡಿಮಿಡಿಗೊಂಡಿದ್ದ ತಾಪಂ ಸದಸ್ಯರು ಅಧಿಕಾರಿಯ ಏಕಪಕ್ಷೀಯ ವರ್ತನೆ ವಿರುದ್ಧ ಮತ್ತಷ್ಟು ಕ್ರೋಧರಾಗಿ ಮಾತನಾಡಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದಾಗ ಮಧ್ಯ ಪ್ರವೇಶಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಸಹ ಗಲಿಬಿಲಿಗೊಂಡರಲ್ಲದೇ ಸುಮಾರು ರು. 1 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಅಡುಗೆ ಕೋಣೆಗಳ ಬಗ್ಗೆ ಸದಸ್ಯರಿಗೆ ಮಾಹಿತಿ ಇಲ್ಲ ಎಂದರೆ ಏನರ್ಥ ಎಂದು ಸದಸ್ಯರಿಂದ ಚೀಮಾರಿ ಹಾಕಿಸಿಕೊಂಡು ಕುಳಿತರು.
ಅಡುಗೆ ಕೋಣೆ ಹಂಚಿಕೆಯಲ್ಲಿ ಶಡ್ಯಂತ್ರ ನಡೆದಿದ್ದು, ಅವಶ್ಯಕತೆಗೆ ಅನುಗುಣವಾಗಿ ಶಾಲೆಗಳಿಗೆ ಹಂಚಿಕೆಯಾಗಿಲ್ಲ. ಸಮಿತಿ ಗಮನಕ್ಕೆ ತರದೇ ತಯಾರಿಸಿದ ಹಳೆಯ ಯಾದಿಯನ್ನು ರದ್ದುಪಡಿಸಬೇಕು. ತಾಪಂ ಸಭೆಯಲ್ಲಿ ಈ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆದು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಾಪಂ ಸದಸ್ಯ ಚನ್ನಪ್ಪ ಜಗಲಿ ಅಧಿಕಾರಿಗೆ ತಾಕೀತು ಮಾಡಿದರು. ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ 450 ವಿದ್ಯಾರ್ಥಿಗಳಿಗೆ ಕೇವಲ ನಾಲ್ಕು ಜನ ಶಿಕ್ಷಕರಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಶಿವನಗೌಡ ಕಂಠಿಗೌಡ್ರ ಅಧಿಕಾರಿ ವಿರುದ್ಧ ಆರೋಪ ಮಾಡಿದರು. ಸಭೆಯಲ್ಲಿ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇದೆ. ಅದರಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ಶಾಲೆಗಳನ್ನು ನಡೆಸುತ್ತಿದ್ದು, ಈಗಾಗಲೇ ತಮ್ಮ ಶಾಲೆಗೆ ಶಿಕ್ಷಕರನ್ನು ನಿಯೋಜನೆ ಮಾಡಿದ್ದು ಬರುತ್ತಾರೆ ಎಂದು ಉತ್ತರಿಸಿದರು.
ಸಂಪೂರ್ಣ ಕಳಪೆ: ಭೂ ಸೇನಾ ನಿಗಮದ ವತಿಯಿಂದ ಲಕ್ಷಾಂತರ ಹಣ ವೆಚ್ಚದಲ್ಲಿ ಬೆಳಗಟ್ಟಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿದ್ದು, ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸದ್ಯ ಸೋರುತ್ತಿದೆ. ಯಲ್ಲಾಪುರ ತಾಂಡಾದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದು, ಸಂಪೂರ್ಣ ಕಿತ್ತುಹೋಗಿದೆ. ಜಿಲ್ಲಾಧಿಕಾರಿಗಳಿಂದ ಕಾಮಗಾರಿ ಪ್ರಾರಂಭಿಸುವುದಕ್ಕೆ ಯಾವುದೇ ಪರವಾನಗಿ ಪಡೆಯದೇ, ಯಾವುದೇ ಸದಸ್ಯರ ಗಮನಕ್ಕೆ ತರದೇ ಕಾಮಗಾರಿ ನಡೆಸುತ್ತಿದ್ದು, ಭೂ ಸೇನಾ ನಿಗಮಕ್ಕೆ ತಾಲೂಕಿನಲ್ಲಿ ಯಾವುದೇ ಕಾಮಗಾರಿಗಳನ್ನು ನೀಡದಂತೆ ಸಭೆಯಲ್ಲಿ ಸದಸ್ಯ ನಿಂಬಣ್ಣ ಮಡಿವಾಳರ ಒತ್ತಾಯಿಸಿದರು.
ತಾಪಂ ಅಧ್ಯಕ್ಷೆ ಸುನಂದಾ ಬಿದರಳ್ಳಿ ವಹಿಸಿದ್ದರು. ಉಪಾಧ್ಯಕ್ಷೆ ಶಾರದಾ ಕವಲೂರ, ಸದಸ್ಯ ತಿಮ್ಮರಡ್ಡಿ ಅಳವಂಡಿ, ಸುಶೀಲಾ ಪರಮೇಶ ಲಮಾಣಿ, ಸುಷ್ಮಾ ಸೊರಟೂರ, ಫಕ್ಕೀರವ್ವ ಮುಂಡವಾಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಹಾಜರಿದ್ದರು.