ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಳೆ: ಕನ್ನಿಹಳ್ಳಿ ಡ್ಯಾಂ, ಕೆರೆ ಭರ್ತಿ, ಮಾಲ್ವಿ ಡ್ಯಾಂಗೆ 3 ಅಡಿ ನೀರು

Mainashree
Updated On : 8 Jun 2013, 10:57 am

ಹಗರಿಬೊಮ್ಮನಹಳ್ಳಿ: ಗುರುವಾರ ರಾತ್ರಿ ಹಾಗೂ ಶುಕ್ರವಾರ ಬೆಳಗಿನಜಾವ ತಾಲೂಕಿನ ಹಲವು ಕಡೆಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ತಾಲೂಕಿನ ಕನ್ನಿಹಳ್ಳಿ ಗ್ರಾಮದ ಬಳಿ ಕಟ್ಟಿರುವ ಚೆಕ್ ಡ್ಯಾಂ ಮತ್ತು ಗ್ರಾಮದ ಕೆರೆ ಸಂಪೂರ್ಣ ಭರ್ತಿಯಾಗಿದೆ. ಮಾಲ್ವಿ ಡ್ಯಾಂಗೆ ಮೂರು ಅಡಿ ನೀರು ಬಂದಿದೆ.
ಇತ್ತ ತಾಲೂಕಿನ ವಿವಿಧ ಕಡೆಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಮಳೆಯಿಂದಾಗಿ ತಾಲೂಕಿನಾದ್ಯಂತ ಯಾವುದೆ ಆಸ್ತಿ-ಪಾಸ್ತಿ, ಪ್ರಾಣ ಹಾನಿ ಸಂಭವಿಸಿರುವ ವರದಿಯಾಗಿಲ್ಲ ಎಂದು ಉಪತಹಸೀಲ್ದಾರ್ ಎಂ.ರಘುಪತಿ ತಿಳಿಸಿದ್ದಾರೆ.
ತಾಲೂಕಿನ ಗಡಿಗ್ರಾಮ ಕನ್ನಿಹಳ್ಳಿ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಗ್ರಾಮದ ಬಳಿ ಹರಿಯುವ ಹಳ್ಳ ಭರ್ತಿಯಾಗಿ ಹರಿದಿದೆ. ಪರಿಣಾಮ ಹಳ್ಳಕ್ಕೆ ಕಟ್ಟಿರುವ ಚೆಕ್ ಡ್ಯಾಂ ತುಂಬಿ ನೀರು ಹೊರಕ್ಕೆ ಹರಿದರೆ, ಇತ್ತ ಗ್ರಾಮದ ಬಳಿಯ ಕೆರೆ ಕೊಡಿಬಿದ್ದು ನೀರು ಹಳ್ಳದ ಮೂಲಕ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದುಹೋಗಿ ಮಾಲ್ವಿ ಡ್ಯಾಂಗೆ ಸೇರಿದೆ.
ಗ್ರಾಮದ ಬಳಿ ಇರುವ ಚೆಕ್ ಡ್ಯಾಂ ಮತ್ತು ಕೆರೆಗಳು ತುಂಬಿದ್ದರಿಂದ ಕನ್ನಿಹಳ್ಳಿ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಇದನ್ನು ನೋಡಲು ಗ್ರಾಮಸ್ಥರು ಮುಂಜಾನೆಯಿಂದಲೆ ತಂಡೋಪತಂಡವಾಗಿ ಬಂದು ವೀಕ್ಷಿಸುತ್ತಿದ್ದು ಸಾಮಾನ್ಯವಾಗಿತ್ತು.
ಆತಂಕ: ಈ ಮಧ್ಯೆ ಸುಮಾರು ರು. 50 ಲಕ್ಷವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ಕಾಮಗಾರಿ ಗುಣಮಟ್ಟದ ಬಗ್ಗೆ ಗ್ರಾಮಸ್ಥರಲ್ಲಿ ಆತಂಕವಿದೆ. ಚೆಕ್ ಡ್ಯಾಂ ಎಡ ಮತ್ತು ಬಲಬದಿಯಲ್ಲಿ ಕಲ್ಲಿನಿಂದ ಮಾಡಲಾಗಿರುವ ಪಿಚ್ಚಿಂಗ್ ಕಾಮಗಾರಿ ಕಿತ್ತಿದೆ. ಅಲ್ಲದೆ ಡ್ಯಾಂನ ಮಣ್ಣು ಸಡಿಲವಾಗಿದೆ. ಇನ್ನೊಂದು ಮಳೆ ಸುರಿದರೆ ಚೆಕ್ ಡ್ಯಾಂನ ಮಣ್ಣಿನ ಅಡೆಗೊಡೆ ಕುಸಿದುಬಿಳ್ಳುವ ಸಂಭವವಿದೆ. ಒಂದು ಕಡೆಗೆ ಚೆಕ್ ಡ್ಯಾಂ ಭರ್ತಿಯಾಗಿರುವ ಸಂತಸ ಅನುಭವಿಸುತ್ತಿರುವಾಗಲೆ ಇತ್ತ ಡ್ಯಾಂನ ಕಳಪೆ ಕಾಮಗಾರಿಯ ಭಯ ಗ್ರಾಮಸ್ಥರಲ್ಲಿ ಮನೆಮಾಡಿದೆ.
ಮಳೆ ವಿವರ: ಗುರುವಾರ ರಾತ್ರಿ ಸುರಿದಿರುವ ಮಳೆಯ ಪ್ರಮಾಣ ತಾಲೂಕಿನ ವಿವಿಧ ಮಳೆ ಮಾಪನಾ ಕೇಂದ್ರದಲ್ಲಿ ದಾಖಲಾಗಿರುವಂತೆ ಹಗರಿಬೊಮ್ಮನಹಳ್ಳಿ-6.2ಮಿ.ಮೀ., ಮಾಲ್ವಿ-6.2 ಮಿ.ಮೀ., ಕೊಗಳಿ-27.6 ಮಿ.ಮೀ., ಹಂಪಾಸಾಗರ-18.6 ಮಿ.ಮೀ ಹಾಗೂ ತಂಬ್ರಹಳ್ಳಿ-14.4 ಮಿ.ಮೀ.ಯಷ್ಟು ಪ್ರಮಾಣದಲ್ಲಿ ಮಳೆಸುರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement