ಮಳೆ: ಮನೆಗಳಿಗೆ ನುಗ್ಗಿದ ನೀರು
ಕೊಟ್ಟೂರು: ಪಟ್ಟಣದಲ್ಲಿ ಗುರುವಾರ ಸಂಜೆ ಸುರಿದ ರಭಸದ ಮಳೆ ಪಟ್ಟಣದ ನಾಗರಿಕರನ್ನು ಬಹುವಾಗಿ ಫಜೀತಿಗೆಡಿಸಿತ್ತು.
ಗುಡುಗು, ಮಿಂಚುಗಳ ಆರ್ಭಟಗಳೊಂದಿಗೆ ಆರಂಭಗೊಂಡ ಮಳೆ ಒಂದೇ ಸಮನೆ ಅರ್ಧಗಂಟೆವರೆಗೂ ಸುರಿದ ಪರಿಣಾಮ ಪಟ್ಟಣದಲ್ಲಿನ ಅನೇಕ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿತು.
ಇಲ್ಲಿನ ಅಂಬೇಡ್ಕರ್ನಗರ, ಶ್ರೀ ತೇರುಬಯಲು ಬಸವೇಶ್ವರ ದೇವಸ್ಥಾನದ ಎಡಭಾಗ, ಮುದುಕನಕಟ್ಟೆ, ಬಳ್ಳಾರಿ ಕ್ಯಾಂಪ್, ಜಯಪ್ರಕಾಶ ನಾರಾಯಣ ಕಾಲೋನಿ, ರಾಜೀವ್ ಗಾಂಧಿನಗರ ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ತೊಂದರೆ ಉಂಟುಮಾಡಿತು. ಈ ನಿವಾಸದ ಜನತೆ ಮನೆಗಳಿಗೆ ಹೊಕ್ಕ ನೀರನ್ನು ಹೊರಸಾಗಿಸಲು ಹರಸಾಹಸ ಪಟ್ಟರು.
ತಡವಾಗಿಯಾದರೂ ಎಚ್ಚೆತ್ತ ಪಟ್ಟಣ ಪಂಚಾಯಿತಿ ಸಿಬ್ಬಂದಿ ಚರಂಡಿಗಳನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಶುಕ್ರವಾರ ಆರಂಭಗೊಳಿಸಿದರು.
ಭೇಟಿ: ಮಳೆ ನೀರು ಹೊಕ್ಕ ಪಟ್ಟಣದ ತೇರುಬಯಲು ಬಸವೇಶ್ವರ ದೇವಸ್ಥಾನದ ಹಿಂಭಾಗದ ಪ್ರದೇಶಗಳಿಗೆ ಕೂಡ್ಲಿಗಿ ತಾಲೂಕು ತಹಸೀಲ್ದಾರ್ ಜವರೇಗೌಡ ಭೇಟಿ ನೀಡಿ ಪರಿಶೀಲಿಸಿದರು.
ಪಪಂ ಮುಖ್ಯಾಧಿಕಾರಿ ಹನುಮಂತಮ್ಮ ಕಿರಿಯ ಎಂಜಿನಿಯರ್ ಅರುಣಾ ಪಾಟೀಲ್, ಜೊತೆಗಿದ್ದು ತಕ್ಷಣವೇ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ತೊಡಗಿಸಿಕೊಳ್ಳುತ್ತೇವೆ ಎಂದು ಜನತೆಗೆ ಭರವಸೆ ನೀಡಿದರು.