ಶಾಲೆ ಆವರಣದಲ್ಲಿ ಚರಂಡಿ ನೀರು: ತೊಂದರೆ
ಕೊಟ್ಟೂರು: ಪಟ್ಟಣದಲ್ಲಿ ಮಳೆಯ ಅವಾಂತರ ವಿವಿಧ ರೀತಿಯಲ್ಲಿ ಸಾಗಿದೆ. ಇಲ್ಲಿನ ಶ್ರೀಗುರು ಕೊಟ್ಟೂರೇಶ್ವರ ಪ್ರೌಢಶಾಲೆಗೆ ಮಳೆಯಿಂದಾಗಿ ತುಂಬಿತುಳುಕಿದ ಚರಂಡಿ ನೀರು ಹರಿದು ಬಂದು ಶಾಲೆಯ ವಾತಾವರಣ ಪೂರ್ಣ ದುರ್ಗಂಧ ಬೀರತೊಡಗಿದೆ.
ಕಲ್ಮಶ ನೀರು ಶಾಲೆಯ ಕೋಣೆಗಳಲ್ಲಿ ತುಂಬಿಕೊಂಡಿದೆ. ಶಾಲಾ ಚಟುವಟಿಕೆ ಶುಕ್ರವಾರದ ಮಟ್ಟಿಗೆ ಸಂಪೂರ್ಣ ಸ್ಥಗಿತಗೊಳ್ಳುವಂತಾಯಿತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪಕ್ಕದ ಈಶ್ವರ ದೇವಸ್ಥಾನದಲ್ಲಿ ಶಿಕ್ಷಕರು ಪಾಠಪ್ರವಚನಗೈದರು.
ಅಲಕ್ಷ್ಯ: ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹನುಮಂತಮ್ಮನವರಿಗೆ ತಿಳಿಸಿದರೂ ಈ ಕುರಿತು ಕಿವಿಗೆ ಹಾಕಿಕೊಲಿಲ್ಲ. ಈ ಕುರಿತು ಶಾಲಾ ಸಿಬ್ಬಂದಿಗೆ ಈ ಕೆಲಸ ನಮ್ಮದಲ್ಲ ಲೋಕೋಪಯೋಗಿ ಇಲಾಖೆಯದು, ನಾವೇನು ಮಾಡುವಂತಿಲ್ಲ ಎಂದು ಬೇಜವಾಬ್ದಾರಿತನ ತೋರಿದರು ಎಂದು ಸಿಬ್ಬಂದಿ ವರ್ಗ ತಮ್ಮ ನೋವು ವ್ಯಕ್ತಪಡಿಸಿದರು.