ಹಠಯೋಗಿ ಕ್ರೀಡಾ ಸಾಧನೆ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಜೂ. 7
ನರೇಗಲ್ಲನ ಹಠಯೋಗಿ ಕ್ರೀಡಾ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು ಈಚೆಗೆ ದೆಹಲಿಯಲ್ಲಿ ನಡೆದ 2ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಅತಿ ಹೆಚ್ಚು ಪದಕ ಗೆಲ್ಲುವ ಮೂಲಕ ಕರ್ನಾಟಕದ 4 ಮಕ್ಕಳು ಅತ್ಯುತ್ತಮ ಕ್ರೀಡಾಪಟುಗಳೆಂಬ ಗರಿಮೆ ತಮ್ಮದಾಗಿಸಿಕೊಂಡಿದ್ದಾರೆ.
ಗ್ರಾಮೀಣ ಕ್ರೀಡೆಗಳು ಮರೀಚಿಕೆಯಾಗುವ ಇಂದಿನ ದಿನಗಳಲ್ಲಿ ಸದಾ ಒಂದಿಲ್ಲೊಂದು ಗ್ರಾಮೀಣ ಕ್ರೀಡೆಯಲ್ಲಿ ಆಸಕ್ತಿ ಬೆಳೆಸುತ್ತಿರುವ ನರೇಗಲ್ಲನ ಹಠಯೋಗಿ ಕ್ರೀಡಾ ಸಂಸ್ಥೆಯ 4 ಕ್ರೀಡಾಪಟುಗಳು ದೆಹಲಿ ಇಂದಿರಾಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ಮೇ 23ರಿಂದ 27ರ ವರೆಗೆ ನಡೆದ ಸೌತ್ ಏಶಿಯನ್ ಜಂಪ್‌ರೋಪ್ ಕ್ರೀಡೆಯಲ್ಲಿ 11 ಪದಕ ಗೆದ್ದಿದ್ದಾರೆ. 2ನೇ ದಕ್ಷಿಣ ಏಶಿಯಾ ಕ್ರೀಡೆಯಲ್ಲಿ ಭಾಗವಹಿಸಿ ತೇಜಶ್ವಿನಿ ಕುಂಬಾರ 4 ವಿಭಾಗಗಳಲ್ಲಿ ಸ್ಪರ್ಧಿಸಿ 3 ಬಂಗಾರದ ಹಾಗೂ ಒಂದು ಬೆಳ್ಳಿ ಪದಕ ಪಡೆದರೆ, ಸಂತೋಷ ಯಳಮಲಿ 3 ವಿಭಾಗಗಳಲ್ಲಿ ಸ್ಪರ್ಧಿಸಿ, 3 ಬಂಗಾರದ ಪದಕ ಗೆದ್ದಿದ್ದಾನೆ. ನಯನಾ ಕಿನ್ನಾಳ 2 ವಿಭಾಗಗಳಲ್ಲಿ ಪ್ರತಿನಿಧಿಸಿ 2 ಬೆಳ್ಳಿಯ ಪದಕ ಗೆದ್ದರೆ, ಪೂರ್ಣಿಮಾ ಅಕ್ಕಿ 2 ವಿಭಾಗಗಳಲ್ಲಿ ಪ್ರತಿನಿಧಿಸಿ 2 ಬೆಳ್ಳಿ ಪದಕ ಗೆದ್ದಿದ್ದಾಳೆ.
ಅತ್ಯುತ್ತಮ ಕಿರೀಟ: ದೆಹಲಿಯಲ್ಲಿ ನಡೆದ 2ನೇ ದಕ್ಷಿಣ ಏಶಿಯಾ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಅತಿ ಹೆಚ್ಚು ಪದಕಗಳಿಸಿದ್ದಾರೆ. ಮಾಸ್ಟರ್ ಇವೆಂಟ್‌ನಲ್ಲಿ ತೇಜಶ್ವಿನಿ ಕುಂಬಾರ 3 ಬಂಗಾರ, ಒಂದು ಬೆಳ್ಳಿ ಪದಕ, ಅಮೃತಾ ಕಂಚಿ ಹುಸೇನಬಾನು, ಸಂತೋಷ ಯಳಮಲಿ ಟೀಮ್ ಇವೆಂಟ್‌ನಲ್ಲಿ ತಲಾ 3 ಬಂಗಾರದ ಪದಕಗಳ ಗಳಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿಯೇ ವ್ಯಾಸಂಗ
ಇಲ್ಲಿ ಪ್ರತಿಭೆಯನ್ನು ಹೊರಸೂಸಿದ ಪ್ರತಿ ಮಗು ಸರ್ಕಾರಿ ಶಾಲೆಯಲ್ಲಿಯೇ ಕಲಿಯುತ್ತಿದ್ದುದು ವಿಶೇಷ. ಸರ್ಕಾರಿ ಶಾಲೆಯೆಂದರೆ ಉದಾಸೀನ ಹಾಗೂ ಕೀಳು ಭಾವನೆಯಿಂದ ಕಾಣುವ ಜನ ಮೆಚ್ಚುವಂತಹ ಈ ಮಕ್ಕಳು ಸಾಧನೆ ಮಾಡಿದ್ದಾರೆ. ತೇಜಶ್ವಿನಿ ಕುಂಬಾರ ಹಾಗೂ ನಯನಾ ಕಿನ್ನಾಳ ಗಜೇಂದ್ರಗಡದ ಆದರ್ಶ ವಿದ್ಯಾಲಯದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ, ಪೂರ್ಣಿಮಾ ಅಕ್ಕಿ ನರೇಗಲ್ಲಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ 8ನೇ ತರಗತಿ, ಸಂತೋಷ ಯಳಮಲಿ ನರೇಗಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಅಭ್ಯಸಿಸುತ್ತಿದ್ದಾರೆ.
ಸಹಾಯ ಹಸ್ತಕ್ಕೆ ಕಾಯುತ್ತಿರುವ ಸಂಸ್ಥೆ
ದಕ್ಷಿಣ ಏಶಿಯಾ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಮಕ್ಕಳು ಏಶಿಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಪ್ರತಿ ಮಗುವಿಗೆ 1.60 ಲಕ್ಷ ಖರ್ಚಾಗುತ್ತದೆ. ಇದಕ್ಕೆ ಜಂಪ್‌ರೋಫ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ರಾಜ್ಯ ಸಂಸ್ಥೆ ರು. 50 ಸಾವಿರ ಸಹಾಯಧನ ನೀಡಲು ಮುಂದಾಗಿದೆ. ಪ್ರಯಾಣ ಭತ್ಯೆ ಹಾಗೂ ಉಳಿದ ವೆಚ್ಚಕ್ಕಾಗಿ ರಾಜ್ಯದ ಯಾವುದಾದರೂ ಸಂಘ-ಸಂಸ್ಥೆಗಳು, ಕ್ರೀಡಾ ಪ್ರೇಮಿಗಳು, ಜನಪ್ರತಿನಿಧಿಗಳು ಸಹಾಯ ಹಸ್ತಕ್ಕೆ ಮುಂದಾದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ.
-ವಿಶ್ವನಾಥ ಹಿರೇಮಠ, ರಾಜ್ಯ ಜಂಪ್‌ರೋಪ್ ಫೆಡರೇಷನ್ ಅಧ್ಯಕ್ಷ,
ಅಬ್ದುಲ್‌ರಜಾಕ್ ಟೈಲರ್, ರಾಜ್ಯ ಜಂಪ್‌ರೋಪ್ ಫೆಡರೇಷನ್ ಕಾರ್ಯದರ್ಶಿ.
ನಿಂಗರಾಜ ಬೇವಿನಕಟ್ಟಿ