ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹುಬ್ಬಳ್ಳಿಗಷ್ಟೇ ಸೀಮಿತವಾದ ಫುಟ್‌ಪಾತ್ ತೆರವು

Mainashree
Updated On : 8 Jun 2013, 10:45 am

ಧಾರವಾಡ:  ಫುಟ್‌ಪಾತ್ ತೆರವು ಕಾರ್ಯಾಚರಣೆ ಬರೀ ಹುಬ್ಬಳ್ಳಿಗಷ್ಟೇ ಸೀಮಿತವಾಗಿದ್ದು, ಧಾರವಾಡ ನಗರ ಫುಟ್‌ಪಾತ್ ಸಮಸ್ಯೆ ಅನುಭವಿಸುತ್ತಿದೆ. ಆದ್ದರಿಂದ ಧಾರವಾಡದಲ್ಲಿ ಫುಟ್‌ಪಾತ್ ಕಾರ್ಯಾಚರಣೆ ಯಾವಾಗ ಎಂಬ ಪ್ರಶ್ನೆಗೆ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ಮೂಲಕ ಉತ್ತರ ನೀಡಬೇಕಿದೆ.
ಕಳೆದ ವಾರ ನಿರಂತರವಾಗಿ ನಾಲ್ಕೈದು ದಿನಗಳ ಅವಳಿ ನಗರದಗಳಲ್ಲಿ ಫುಟ್‌ಪಾತ್ ಅತಿಕ್ರಮಣ ಕುರಿತಂತೆ 'ಕನ್ನಡಪ್ರಭ' ವಿಶೇಷ ವರದಿಗಳನ್ನು ಪ್ರಕಟಿಸಿದ್ದು, ಇದನ್ನು ಗಮನಿಸಿ ಮಹಾನಗರ ಪಾಲಿಕೆಯ ಆಯುಕ್ತ ವೈ.ಎಸ್. ಪಾಟೀಲ ಎಚ್ಚೆತ್ತುಕೊಂಡು ಪೊಲೀಸ್ ಇಲಾಖೆ ಸಹಾಯದೊಂದಿಗೆ ಫುಟ್‌ಪಾತ್ ತೆರವು ಕಳೆದ ಮೂರು ದಿನಗಳಿಂದ ಆರಂಭಿಸಿದ್ದಾರೆ. ಆದರೆ, ಈ ಕಾರ್ಯಾಚರಣೆ ಹುಬ್ಬಳ್ಳಿಗಷ್ಟೇ ಸೀಮಿತವಾಗಿದ್ದು, ಧಾರವಾಡದತ್ತ ಯಾವಾಗ ಈ ತೆರವು ಕಾರ್ಯಾಚರಣೆ ಕಾಲಿಡುವುದು ಎಂಬ ಕಾತುರ ಇಲ್ಲಿನ ಸಾರ್ವಜನಿಕರಿಗಿದೆ.
ಪಾದಚಾರಿಗೆ ಕಿರಿಕಿರಿ: ಧಾರವಾಡದಲ್ಲಿ ಪ್ರಮುಖವಾಗಿ ಸುಭಾಸ ರಸ್ತೆ, ಮಾರುಕಟ್ಟೆ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಫುಟ್‌ಪಾತ್ ಅತಿಕ್ರಮಣವಾಗಿದೆ. ಅಲ್ಲದೇ, ಫುಟ್‌ಪಾತ್ ಮೇಲೆ ಬಟ್ಟೆ, ಚಪ್ಪಲಿ, ಪಾನ್-ಬೀಡಾ, ಹಣ್ಣು, ತರಕಾರಿ ಸೇರಿದಂತೆ ಅನೇಕ ಅಂಗಡಿಗಳು ಮತ್ತೆ ತಲೆ ಎತ್ತಿವೆ. ಸಾಲದೆಂಬಂತೆ ಫುಟ್‌ಪಾತ್ ಮೇಲೆ ಸಾಕಷ್ಟು ಅಂಗಡಿ ಮಾಲೀಕರು ಅಂಗಡಿಯ ಗುರುತರ ಬೋರ್ಡ್‌ಗಳನ್ನು ನೇತು ಬಿಟ್ಟಿದ್ದಾರೆ. ಇದು ಪಾದಾಚಾರಿಗಳಿಗೆ ತೀವ್ರ ಕಿರಿಕಿರಿಯಾಗಿದೆ. ಅಲ್ಲದೇ, ಅಧಿಕೃತವಾಗಿ ಕಾಯಂ ಅಂಗಡಿಗಳ ಸಾಮಗ್ರಿಗಳು ಫುಟ್‌ಪಾತ್ ಮೇಲೆ ಕಾಣ ಸಿಗುವುದು ಇಲ್ಲಿ ಜನತೆಗೆ ಸಾಮಾನ್ಯ. ನಗರಲ್ಲಿ ಸಾರ್ವಜನಿಕ ಆಸ್ತಿ ಎಂದು ಪರಿಗಣಿಸಲ್ಪಡುವ ಫುಟ್‌ಪಾತ್ ಕೆಲವೇ ಕೆಲವರ ಸ್ವತ್ತಾಗಿವೆ ಎಂಬುವುದಕ್ಕೆ ಇಲ್ಲಿನ ಸಭಾಸ ಹಾಗೂ ಮಾರುಕಟ್ಟೆಯಲ್ಲಿ ಒಂದು ಸುತ್ತು ತಿರುಗಾಡಿದರೆ ತಿಳಿಯುತ್ತದೆ. ಫುಟ್‌ಪಾತ್ ಅತಿಕ್ರಮಣದ ಕುರಿತು ಮಾಧ್ಯಮಗಳು ವರದಿಗಳ ಮೂಲಕ ಗಮನಸೆಳೆದ ಸಂದರ್ಭದಲ್ಲಿ ಮಾತ್ರ ಪಾಲಿಕೆ ಅಕ್ರಮವಾಗಿ ನಿಲ್ಲಿಸಿದ ಅಂಗಡಿಗಳ ತೆರವಿಗೆ ಮುಂದಾಗುತ್ತದೆ. ತದನಂತರ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೇ, ನಿರುಮ್ಮಳಾಗಿ ನಿದ್ರೆಗೆ ಜಾರುತ್ತದೆ. ಈ ರೀತಿಯ ಪಾಲಿಕೆ ಕ್ರಮಗಳು ಶ್ರೀಸಾಮಾನ್ಯರಿಗೆ ಬೇಸರ ಮೂಡಿಸುತ್ತಿವೆ. ಫುಟ್‌ಪಾತ್ ಅತಿಕ್ರಮಣದಿಂದ ನಗರದ ರಸ್ತೆಗಳಲ್ಲಿ ಸಂಚಾರ ತೀವ್ರ ಅಡ್ಡಿ ಉಂಟಾಗುತ್ತಿದೆ. ಫುಟ್‌ಪಾತ್ ಮೇಲೆ ಅಂಗಡಿಗಳಿರುವ ಕಾರಣದಿಂದ ಸಾಕಷ್ಟು ಪಾದಚಾರಿಗಳಿಗೆ ಅಡತಡೆ ಉಂಟಾಗುತ್ತಿರುವುದ್ದರಿಂದ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯ ಮೇಲೆ ನಡೆದಾಡಬೇಕಿದೆ. ಇದರಿಂದ ವಾಹನ ಸವಾರರಿಗೂ ತೊಂದರೆ. ಈ ಹಿನ್ನೆಲೆಯಲ್ಲಿ ಕೂಡಲೇ ಧಾರವಾಡದಲ್ಲೂ ಸಹ ಫುಟ್‌ಪಾತ್ ತೆರವು ಕಾರ್ಯಾಚರಣೆ ಆರಂಭಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement