ಹೂವಿನಹಡಗಲಿಯಲ್ಲಿ ಮಳೆ ಆರ್ಭಟ: ಹಲವೆಡೆ ಮನೆಗಳು ಜಲಾವೃತ
ಹೂವಿನಹಡಗಲಿ: ಕೃಷಿ ಚಟುವಟಿಕೆಗೂ ಬಿಡದಂತೆ ನಿರಂತರವಾಗಿ ಶುಕ್ರವಾರ ಮಳೆ ಸುರಿಯುತ್ತಿದ್ದು, ಕೆಲಕಡೆ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ.
ತಾಲೂಕಿನ ಹುಗುಲೂರು, ನಾಗತಿ ಬಸಾಪುರ, ಹಿರೇಹಡಗಲಿ, ಹಗರನೂರು, ಹೂವಿನಹಡಗಲಿ, ಮೀರಾಕ್ನೂರಹಳ್ಳಿ, ಶಿವಲಿಂಗನಹಳ್ಳಿ, ವಿನೋಬನಗರ ಸೇರಿದಂತೆ ತಾಲೂಕಿನಲ್ಲಿ 69.2 ಮಿ.ಮೀ. ಮಳೆ ಸುರಿದಿದೆ.
ಮಳೆ ಆರ್ಭಟದಿಂದ ಹುಗಲೂರಿನಲ್ಲಿ 4-5 ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಮಳೆಯಾಗುತ್ತಿದಂತೆಯೇ ಮನೆಯಲ್ಲಿ ವಾಸವಾಗಿದ್ದ ಜನರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಮಳೆ ನೀರನ್ನು ಹೊರಗೆ ಹಾಕಲು ತಾಲೂಕಿನ ನಂದಿಹಳ್ಳಿ ಗ್ರಾಪಂ ಅಧಿಕಾರಿಗಳು ನೀರೆತ್ತಲು ಆಯಿಲ್ ಇಂಜಿನ್ ಬಳಕೆ ಮಾಡಿದ್ದಾರೆ.
ಹುಗಲೂರು ಮತ್ತು ನಾಗತಿ ಬಸಾಪುರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿರುವ ಪರಿಣಾಮ ಮನೆಯಲ್ಲಿ ಸಂಗ್ರಹಿಸಲಾಗಿದ್ದ ಜೋಳ ಮತ್ತು ಅಗತ್ಯ ಸಾಮಗ್ರಿಗಳು ನೀರು ಪಾಲಾಗಿವೆ. ನಂತರ ಮನೆಯಲ್ಲಿ ಬಿತ್ತನೆಗೆ ಸಂಗ್ರಹಿಸಲಾಗಿದ್ದ ರಸಗೊಬ್ಬರ, ಬಿತ್ತನೆ ಬೀಜ ನೀರಿನಿಂದ ತೊಯ್ದು ನಷ್ಟ ಉಂಟಾಗಿದೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡರು.
ಅಧಿಕಾರಿಗಳು ಭೇಟಿ: ಹಾನಿಯಾಗಿರುವ ತಾಲೂಕಿನ ಹುಗಲೂರು, ನಾಗತಿ ಬಸಾಪುರ ಗ್ರಾಮಗಳಿಗೆ ತಹಸೀಲ್ದಾರ್ ವಿಜಯಕುಮಾರ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟ ಹಾನಿಯಾಗಿರುವ ಬಗ್ಗೆ ತಾಲೂಕು ಕಚೇರಿಗೆ ಮಾಹಿತಿ ನೀಡಲು 24 ಗಂಟೆಗಳ ಕಾಲ ಕಂಟ್ರೋಲ್ ರೂಂ ತೆರೆಯಲಾಗಿದೆ. ಸಾರ್ವಜನಿಕರು 08399-240238 ದುರವಾಣಿಗೆ ಕರೆ ಮಾಡಬಹುದೆಂದು ತಿಳಿಸಿದ್ದಾರೆ.
ಹಿರೇಹಡಗಲಿ, ಹಗರನೂರು, ದೇವಗೊಂಡನಹಳ್ಳಿ ಕೆರೆಗಳಿಗೆ ನೀರು ಬಂದಿದೆ.