ಅಬ್ಬಬ್ಬಾ...! ತರಕಾರಿ ದುಬಾರಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜೂ. 8
ಒಂದೆಡೆ ಅಕ್ಕಿ, ಬೇಳೆ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದ್ದರೆ, ಸದ್ಯ ತರಕಾರಿಗಳ ಬೆಲೆಯೂ ಹೆಚ್ಚಾಗಿದ್ದು ಜನ ಸಾಮಾನ್ಯರು ಬೆಲೆ ಕೇಳಿ ಬೆಚ್ಚಿ ಬೀಳುತ್ತಿದ್ದಾರೆ.
ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಎಲ್ಲ ತರಕಾರಿಗಳ ದರವೂ ಏರಿದೆ. ಯಾವುದೇ ತರಕಾರಿ ಬೆಲೆ ಕೇಳಿದರೂ ಕೇವಲ ಕಾಲು (ಪಾವ್) ಕೆಜಿ ದರ ಮಾತ್ರ ಹೇಳುತ್ತಾರೆ. ಏಕೆಂದರೆ ಒಂದು ಕೆಜಿ ಬಿನ್ಸ್ ಬೆಲೆ ರು. 100. ಕಾಲು ಕೇಜಿಗೆ ರು. 25 ಅದಕ್ಕಾಗಿ ವ್ಯಾಪಾರಸ್ಥರು ಕೇವಲ ಕಾಲು ಕೇಜಿ ದರವನ್ನೇ ಹೇಳುತ್ತಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆಜಿ ಟಮೇಟೋ ಬೆಲೆ ರು. 60, ಒಂದು ಕೇಜಿ ಸೌತೆಕಾಯಿಗೆ ರು. 48, ಒಂದು ಕೇಜಿ ಹಿರೇಕಾಯಿಗೆ ರು. 50, ಒಂದು ಕೇಜಿ ಬೆಂಡೆಕಾಯಿಗೆ ರು. 50, ಒಂದು ಕೇಜಿ ಹಸಿ ಮೆಣಸಿನಕಾಯಿಗೆ ರು. 80, ಒಂದು ಕೇಜಿ ಈರುಳ್ಳಿಗೆ ರು. 20, ಒಂದು ಕೇಜಿ ಆಲೂಗಡ್ಡೆ ರು. 20, ಒಂದು ಕೇಜಿ ಕಾಲಿಪ್ಲಾವರ್ ರು. 100, ಒಂದು ಕೇಜಿ ಬೀಟ್ರೂಟ್ 60, ಒಂದು ಕೇಜಿ ಕೋಸ್ಗಡ್ಡೆ ರು. 60, ಒಂದು ಕೇಜಿ ಗಜ್ಜರಿಗೆ ರು. 60, ಹೀಗೆ ಎಲ್ಲ ತರಕಾರಿಗಳ ಬೆಲೆಯೂ ನೂರಕ್ಕೆ ಹತ್ತಿರವಾಗಿಯೇ ಇದೆ. ಇದರಿಂದ ಸಾಮಾನ್ಯ ವರ್ಗದ ಬಡ ಜನತೆ ಹೆಚ್ಚಿದ ದರದಿಂದಾಗಿ ಕಂಗಾಲಾಗಿದ್ದಾರೆ.
ಮಂಕಾದ ತರಕಾರಿ ಮಾರುಕಟ್ಟೆ: ಪ್ರತಿ ಸೋಮವಾರ ಜರುಗುವ ಮುಂಡರಗಿ ಸಂತೆಗೆ ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳಿಂದಲೂ ಜನರು ಬರುತ್ತಾರೆ. ಸಂತೆಗೆ ಬಂದವರು ಒಂದು ವಾರಕ್ಕಾಗುವಷ್ಟು ತರಕಾರಿಗಳನ್ನು ಒಮ್ಮೆಲೆ ತೆಗೆದುಕೊಂಡು ಹೋಗುತ್ತಾರೆ. ಇದೀಗ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಸಂತೆಗೆ ಬರುವ ಗ್ರಾಮೀಣ ಪ್ರದೇಶದ ಗ್ರಾಹಕರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಒಂದು ವೇಳೆ ಬಂದರೂ ಅತಿ ಅವಶ್ಯವಿರುವ ತರಕಾರಿಗಳನ್ನು ಮಾತ್ರ ಕೊಳ್ಳುತ್ತಿದ್ದಾರೆ. ಪ್ರತಿವಾರ ಗ್ರಾಮೀಣ ಜನರಿಂದ ತುಂಬಿ ತುಳುಕುವ ಸಂತೆ ಇದೀಗ ಹೆಚ್ಚು ಜನರಿಲ್ಲದೆ ಮಂಕಾಗಿದೆ.
ಮದುವೆಗಳಿಂದ ಬೆಲೆ ಏರಿಕೆ: ಬೇಸಿಗೆ ಸಮಯದಲ್ಲಿ ಮಾರುಕಟ್ಟೆಗೆ ತರಕಾರಿ ಕಡಿಮೆ ಪ್ರಮಾಣದಲ್ಲಿ ಬರುತ್ತವೆ. ಇದೇ ಸಮಯದಲ್ಲಿ ಮದುವೆಗಳು ಹೆಚ್ಚು ನಡೆಯುವುದರಿಂದ ಎಲ್ಲರೂ ತರಕಾರಿ ಮಾರುಕಟ್ಟೆಗೆ ಬಂದು ವ್ಯಾಪಾರಿಗಳಿಗಾಗಿ ನಡೆಯುವ ಲಿಲಾವಿನಲ್ಲಿಯೇ ಹೆಚ್ಚು ಬೆಲೆ ಏರಿಸಿ ತರಕಾರಿ ಕೊಳ್ಳುತ್ತಾರೆ. ಅವರಷ್ಟೇ ಹಣ ನೀಡಿ ನಿತ್ಯದ ವ್ಯಾಪಾರಿಗಳೂ ತರಕಾರಿ ಕೊಳ್ಳುತ್ತಾರೆ. ಹೀಗಾಗಿ ತರಕಾರಿ ಬೆಲೆ ಇನ್ನೂ ಹೆಚ್ಚಾಗುತ್ತದೆ. ತರಕಾರಿ ಬೆಲೆ ಏರಿಕೆಯಿಂದಾಗಿ ಹೋಟೆಲ್ಗಳಲ್ಲಿನ ತಿಂಡಿಗಳ ಬೆಲೆಯೂ ಹೆಚ್ಚಾಗಿದೆ.
ಶರಣು ಸೊಲಗಿ