ಬಿತ್ತನೆಗೆ ಗೊಬ್ಬರದ್ದೆಚಿಂತೆ..!
ಕನ್ನಡಪ್ರಭ ವಾರ್ತೆ, ಗದಗ, ಜೂ. 8
ಜಿಲ್ಲೆಯಲ್ಲಿ ಈ ಬಾರಿ ವರುಣ ಬೇಗನೇ ಕೃಪೆ ತೋರಿದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಬಲು ಜೋರಾಗಿಯೇ ನಡೆಯುತ್ತಿದೆ. ಅದರಲ್ಲಿಯೂ ಹೆಸರು ಬಿತ್ತನೆಯಲ್ಲಿ ರೈತ ಸಮುದಾಯ ಮಗ್ನವಾಗಿದ್ದಾರೆ. ಆದರೆ, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಈರುಳ್ಳಿ ಬಿತ್ತನೆಗೆ ಇನ್ನು ಕಾಲಾವಕಾಶವಿದೆ. ಈರುಳ್ಳಿ ಬಿತ್ತನೆಯ ವೇಳೆಯಲ್ಲಿ ರೈತರಿಗೆ ಹೆಚ್ಚಾಗಿ ಬೇಕಾಗುವುದು ಡಿಎಪಿ ಗೊಬ್ಬರ, ಸದ್ಯ ಜಿಲ್ಲೆಯಲ್ಲಿರುವ ಗೊಬ್ಬರ ದಾಸ್ತಾನು ಗಮನಿಸಿದಲ್ಲಿ ಮುಂಬರುವ ದಿನದಲ್ಲಿ ಡಿಎಪಿ ಕೊರತೆ ಕಂಡುಬರುವ ಸಾಧ್ಯತೆ ಇದೆ.
ಬಿತ್ತನೆ ಜೋರು: ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 2 ಲಕ್ಷ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಗದಗ ತಾಲೂಕಿನಲ್ಲಿ 41700 ಹೆ, ಮುಂಡರಗಿ ತಾಲೂಕಿನಲ್ಲಿ 36600 ಹೆ, ನರಗುಂದ ತಾಲೂಕಿನಲ್ಲಿ 29500 ಹೆ, ರೋಣ ತಾಲೂಕಿನಲ್ಲಿ 68000, ಶಿರಹಟ್ಟಿ ತಾಲೂಕಿನಲ್ಲಿ 64700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಪ್ರಸಕ್ತ ಮುಂಗಾರು ಜೂನ್ ತಿಂಗಳ ಪೂರ್ವದಲ್ಲಿಯೇ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ (ಮೇ ಅಂತ್ಯಕ್ಕೆ)
ಈರುಳ್ಳಿಗೆ ಸಿದ್ಧತೆ: ರಾಜ್ಯದಲ್ಲಿಯೇ ಅತ್ಯಂತ ಹೆಚ್ಚಿನ ಈರುಳ್ಳಿ ಬೆಳೆವ ಜಿಲ್ಲೆ ಎನ್ನುವ ಹೆಗ್ಗಳಿಕೆ ಹೊಂದಿರುವ ಗದಗ ಜಿಲ್ಲೆಯಲ್ಲಿ ಸರಾಸರಿ (ಪ್ರತಿವರ್ಷ) 1 ಲಕ್ಷ 25 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗುತ್ತದೆ. ಕಳೆದೆರಡು ವರ್ಷಗಳಿಂದ ಸಮರ್ಪಕ ಮಳೆಯಾಗದೇ ಇರುವುದರಿಂದ ಈರುಳ್ಳಿ ಬಿತ್ತನೆಯಲ್ಲಿ ಕುಂಠಿತವಾಗಿತ್ತು. ಆದರೆ, ಈ ಬಾರಿ ಮುಂಗಾರು ಪ್ರಾರಂಭದಲ್ಲಿಯೇ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಈ ಬಾರಿ 1 ಲಕ್ಷ 50 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗುವ ಸಾಧ್ಯತೆ ಇದ್ದು, ಇದಕ್ಕಾಗಿ ರೈತರು ಈಗಾಗಲೇ 3 ಬಾರಿ ಹೊಲ ಹರಗಿ ಸಿದ್ಧಗೊಳಿಸಿದ್ದಾರೆ.
ಗೊಬ್ಬರದ್ದೇ ಚಿಂತೆ: ಈರುಳ್ಳಿ ಬೆಳೆಗೆ ಒಮ್ಮೆ ಬಿತ್ತನೆ ಮಾಡುವ ವೇಳೆ ಹಾಕುವ ಗೊಬ್ಬರವೇ ಹೆಚ್ಚು ಸೂಕ್ತ.ಹಾಗಾಗಿ ರೈತರು ವರ್ಷಪೂರ್ತಿ ಬೆಳೆಗಳಿಗೆ ಪೋಷಕಾಂಶ ನೀಡುವ ಡಿಎಪಿ ಗೊಬ್ಬರವನ್ನು ಬಹುವಾಗಿ ಬಳಸುತ್ತಾರೆ. ಈ ಬಾರಿ ಈರುಳ್ಳಿ ಬಿತ್ತನೆಯಲ್ಲಿ ಹೆಚ್ಚಳವಾಗುವುದರಿಂದ ಸಹಜವಾಗಿ ಡಿಎಪಿ ಗೊಬ್ಬರದ ಬೇಡಿಕೆಯೂ ಹೆಚ್ಚಳವಾಗಲಿದ್ದು, ಸೂಕ್ತವಾದ ಸಮಯದಲ್ಲಿ ಸರಿಯಾದ ಕಂಪನಿಯ ಡಿಎಪಿ ಗೊಬ್ಬರ ಸಿಗುತ್ತದೆಯೇ ಎನ್ನುವ ಚಿಂತೆಯಲ್ಲಿ ಜಿಲ್ಲೆಯ ರೈತರಿದ್ದು, ಈ ಕುರಿತು ಕೃಷಿ ಇಲಾಖೆ ಗಮನ ನೀಡಬೇಕಿದೆ.
ಶಿವಕುಮಾರ ಕುಷ್ಟಗಿ