ಸಮ್ಮೇಳನ ಯಶಸ್ವಿಗೊಳಿಸೋಣ: ಶಾಸಕ ದೊಡ್ಡಮನಿ
ಮುಂಡರಗಿ: ಮುಂಡರಗಿ ತಾಲೂಕು ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಯಾವುದೇ ಸಾಹಿತ್ಯಿಕ, ಸಾಂಸ್ಕೃತಿ ಕಾರ್ಯಗಳು ನಡೆದರೆ ಜಾತಿ ಬೇಧ, ಪಕ್ಷಬೇಧ ಮರೆತು ಎಲ್ಲರೂ ಒಂದಾಗಿ ಆಚರಿಸುತ್ತಾರೆ. ಅದರಂತೆ ಜೂ. 15 ಮತ್ತು 16 ರಂದು ಜರುಗಲಿರುವ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲರೂ ಸೇರಿ ಅದ್ಧೂರಿಯಾಗಿ ಆಚರಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು. ಅವರು ಶನಿವಾರ ಜೂ. 15,16 ರಂದು ಮುಂಡರಗಿಯಲ್ಲಿ ಜರುಗಲಿರುವ ಗದಗ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿರುವ ಬೃಹತ್ ಬೈಕ್ ರ್ಯಾಲಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಮ್ಮೇಳನಕ್ಕೆ ಕಾಲಾವಕಾಶ ಕಡಿಮೆ ಇರುವುದರಿಂದ ಎಲ್ಲರೂ ಸಕ್ರೀಯವಾಗಿ ಪಾಲ್ಗೊಂಡು ಬೇರೆಡೆಯಿಂದ ಬರುವ ಎಲ್ಲ ಸಾಹಿತಿಗಳು, ಸಾಹಿತ್ಯಾಸಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಮಾತನಾಡಿ, ಕನ್ನಡ ಭಾಷೆ, ನೆಲ, ಜಲ ಮತ್ತು ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಮನೆ ಮನಗಳಿಗೆ ತಿಳಿಸುವ ಕೆಲಸವನ್ನು ಕನ್ನಡಾಭಿಮಾನಿಗಳು ಕೈಗೊಳ್ಳಬೇಕು. ಕರ್ನಾಟಕವನ್ನು ವಿಭಜಿಸಿ ನೆರೆಯ ರಾಜ್ಯಗಳು ಕನ್ನಡಿಗರ ಮೇಲೆ ದಬ್ಬಾಳಿಕೆಯನ್ನು ಮಾಡುತ್ತಿವೆ. ಕರ್ನಾಟಕದ ಸಂಪತ್ತನ್ನು ರಕ್ಷಣೆ ಮಾಡುವಲ್ಲಿ ಯುವಕರು ಮುಂದೆ ಬರಬೇಕು. ಬೈಕ್ ರ್ಯಾಲಿಯನ್ನು ಗದಗ ಜಿಲ್ಲೆಯ ಎಲ್ಲ ತಾಲೂಕು ಮತ್ತು ಗ್ರಾಮಗಳಲ್ಲಿ ಮಾಡಬೇಕು. ಅಂದಾಗ ಜನತೆಗೆ ಸಮ್ಮೇಳನ ಹಾಗೂ ಕನ್ನಡ ಭಾಷೆ ಬಗೆಗೆ ತಿಳಿವಳಿಕೆ ಮೂಡುತ್ತದೆ. ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಕಂಕಣಬದ್ಧರಾಗಿ ನಿಲ್ಲಬೇಕು ಎಂದರು. ಅನ್ನದಾನೀಶ್ವರ ಮಠದಿಂದ ಪ್ರಾರಂಭವಾದ ಬೈಕ್ರ್ಯಾಲಿಯು ಪುರಸಭೆ ವ್ಯಾಪ್ತಿಯ ಬ್ಯಾಲವಾಡಗಿ, ಹೆಸರೂರ ಪ್ಲಾಟ್, ಶಿರೋಳ, ರಾಮೇನಹಳ್ಳಿಗಳಲ್ಲಿ ಸಂಚರಿಸಿ ನಂತರ ತೋಂಟದಾರ್ಯ ಮಠದಲ್ಲಿ ಮುಕ್ತಾಯಗೊಂಡಿತು.
ಹೇಮಂತಗೌಡ ಪಾಟೀಲ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ, ವಿ.ಎಲ್. ನಾಡಗೌಡ್ರ, ಕೊಟ್ರೇಶ ಅಂಗಡಿ, ರವೀಂದ್ರ ಉಪ್ಪಿನಬೆಟಗೇರಿ, ಧೃವಕುಮಾರ ಹೊಸಮನಿ, ತಹಸೀಲ್ದಾರ್ ಎಸ್.ಆರ್. ಶಿರಕೋಳ, ಎಸ್.ಬಿ. ಕರಿಭರಮಗೌಡರ, ಆರ್.ಎಲ್. ಪೊಲೀಸಪಾಟೀಲ, ಆರ್.ಬಿ. ಡಂಬಳಮಠ, ವಿ.ಸಿ. ಹಂಚಿನಾಳ, ಅಬ್ದುಲ್ ಖುರೇಶಿ, ರಾಮು ಭಜಂತ್ರಿ, ಆರ್.ಎಲ್. ಬದಾಮಿ, ಕೃಷ್ಣ ಸಾಹುಕಾರ, ರಾಘವೇಂದ್ರ ಕುರಿಯವರ, ಲಿಂಗರಾಜಗೌಡ ಪಾಟೀಲ, ಸಂಗಣ್ಣ ಲಿಂಬಿಕಾಯಿ, ಆನಂದಗೌಡ ಪಾಟೀಲ, ಸೊಲಬಣ್ಣ ಜೋಬಾಳಿ, ದೇವು ಹಡಪದ, ನಾಗರಾಜ ಗುಡಿಮನಿ, ಪಾಲಾಕ್ಷಿ ಗಣದಿನ್ನಿ, ಮಂಜುನಾಥ ಮುಧೋಳ, ನಾಗೇಶ ಹುಬ್ಬಳ್ಳಿ, ಬಸವರಾಜ ರಾಮೇನಹಳ್ಳಿ , ಭಾಗ್ಯಲಕ್ಷ್ಮೀ ಇನಾಮತಿ, ತಾಲೂಕು ಕಸಾಪ ಅಧ್ಯಕ್ಷ ಎಸ್.ಬಿ. ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.