ಸುದ್ದಿ ಸಂಕ್ಷೇಪ
ಸಮ್ಮೇಳನದ ಕಾರ್ಯಾಲಯ ಉದ್ಘಾಟನೆ
ನರೇಗಲ್ಲ: ಸ್ಥಳೀಯ ಪಪಂ ಮೇಲಿನ ಸಭಾಂಗಣದಲ್ಲಿ ರೋಣ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಲಯವನ್ನು ಶುಕ್ರವಾರ ಪಪಂ ಸದಸ್ಯ ರಮೇಶ ಕಳಕೊಣ್ಣವರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನರೇಗಲ್ಲ ರೋಣ ತಾಲೂಕಿನಲ್ಲಿ ವಿದ್ಯಾಕಾಶಿಯೆಂದೇ ಹೆಸರಾಗಿದೆ. ಇಂತಹ ಸ್ಥಳದಲ್ಲಿ ತಾಲೂಕು ಸಮ್ಮೇಳನ ನಡೆಸಲು ಅವಕಾಶ ದೊರೆತಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ನಾವೆಲ್ಲರೂ ಸೇರಿ ಇದನ್ನು ಯಶಸ್ವಿಗೊಳಿಸೋಣ ಎಂದರು. ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಲಹಾ ಸಮಿತಿ ಸದಸ್ಯ ಡಿ.ಎ. ಅರವಟಗಿಮಠ ಮಾತನಾಡಿದರು. ಕಸಾಪ ರೋಣ ತಾಲೂಕು ಅಧ್ಯಕ್ಷ ಡಾ. ಶಿವರಾಜ ಗುರಿಕಾರ ಮಾತನಾಡಿ, ಸ್ಥಳೀಯ ಪ್ರತಿಭೆಗಳ ಸಾಹಿತ್ಯದ ಕಂಪು ಇತರರಿಗೆ ತಿಳಿಸಲು ಇದೊಂದು ಸೂಕ್ತ ವೇದಿಕೆ. ಇದನ್ನು ನಾವೆಲ್ಲರೂ ಸಮರ್ಪಕವಾಗಿ ಬಳಸಿಕೊಳ್ಳೋಣ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಉಪಾಧ್ಯಕ್ಷ ಸಿ.ಜಿ. ಹುಡೇದಗಡ್ಡಿ ಮಾತನಾಡಿ, ಕೇಂದ್ರ ಕಸಾಪ ಸಮಿತಿಯಿಂದ ತಾಲೂಕು ಸಮ್ಮೇಳನಕ್ಕೆ ರು. 1 ಲಕ್ಷ ಅನುದಾನ ಸಿಗಲಿದೆ. ಉಳಿದ ಸಂಪನ್ಮೂಲಗಳನ್ನು ಕ್ರೋಡಿಕರಿಸಿಕೊಂಡು ಸಮ್ಮೇಳನ ಯಶಸ್ವಿಗೊಳಿಸೋಣ ಎಂದರು. ಸಭೆಯಲ್ಲಿ ನಿವೃತ್ತ ದೈಹಿಕ ನಿರ್ದೇಶಕ ಕೆ.ಐ. ಬಿಸನಳ್ಳಿ, ಶಿಕ್ಷಕ ವಿ.ಎ. ಕುಂಬಾರ, ಎಸ್.ಆರ್. ಕಿನ್ನಾಳ, ಎಸ್.ಎಚ್. ಹಾದಿಮನಿ, ಕೆ.ಸಿ. ಜೋಗಿ, ಅರುಣ ಕುಲಕರ್ಣಿ, ಸಿ.ಕೆ. ಕೇಸರಿ, ನಿಂಗರಾಜ ಬೇವಿನಕಟ್ಟಿ ಮುಂತಾದವರು ಭಾಗವಹಿಸಿದ್ದರು. ಶಿಕ್ಷಕ ಸುರೇಶ ಹಳ್ಳಿಕೇರಿ ಸ್ವಾಗತಿಸಿ, ನಿರೂಪಿಸಿದರು. ಕಸಾಪ ಕೋಶಾಧ್ಯಕ್ಷ ಕೆ.ಎಸ್. ಕಳಕೊಣ್ಣವರ ವಂದಿಸಿದರು.
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಗ್ರಹಿಸಿ ಡಿಸಿಗೆ ಮನವಿ
ಗದಗ: ನಗರದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭವನ ನಿರ್ಮಾಣದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡನಾರ್ಹವಾಗಿದ್ದು, ಈ ಕೂಡಲೇ ಅಂಬೇಡ್ಕರ್ ಭವನ ನಿರ್ಮಾಣ ಕೈಗೊಳ್ಳಲು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಈಚೆಗೆ ಕರ್ನಾಟಕ ದಲಿತ ಸಂಘರ್ಷ (ಡಿಎಸ್ಎಸ್) ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರವರ ನಾಮಾಂಕಿತದಲ್ಲಿ ಜಿಲ್ಲೆ ಕೇಂದ್ರದಲ್ಲಿ ಭವನ ನಿರ್ಮಾಣ ಕಾರ್ಯಕೈಗೊಳ್ಳಲು ಸುಮಾರು 20 ವರ್ಷಗಳಿಂದ ಮನವಿ ಮೂಲಕ ಒತ್ತಾಯಿಸುತ್ತಾ ಬಂದಿದ್ದರೂ ಶಂಕುಸ್ಥಾಪನೆ ಕಾರ್ಯಕೈಗೊಂಡಿರುವುದು ಅಭಿನಂದನೀಯ. ಆದರೆ ಸುಮಾರು 2 ವರ್ಷ ಗತಿಸುತ್ತಾ ಬಂದರೂ ಕಟ್ಟಡವು ನೆಲ ಬಿಟ್ಟು ಮೇಲೆಳದಿರುವುದು ವಿಷಾದನೀಯ. ಜಿಲ್ಲಾಧಿಕಾರಿಗಳು ಈ ಕೂಡಲೇ ತಮ್ಮ ನಿಯೋಗದೊಂದಿಗೆ ತೆರಳಿ ಸ್ಥಳ ವೀಕ್ಷಣೆ ಮಾಡಿ ಮಂದಗತಿಯಲ್ಲಿ ನಡೆಯುತ್ತಿರುವ ಭವನದ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಆದೇಶಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.