ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಪ್ರಯತ್ನ: ಪಾಟೀಲ್
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜೂ. 9
ರಾಷ್ಟ್ರಿಯ ಗ್ರಾಮೀಣ ಆರೋಗ್ಯ ಅಭಿಯಾನ ಅಡಿಯಲ್ಲಿ ನೇಮಕವಾಗಿರುವ ಆಶಾ ಕಾರ್ಯಕರ್ತೆಯರ ಖಾಯಂ, ವೇತನ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪಯತ್ನ ಮಾಡುವುದಾಗಿ ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ಭಾನುವಾರ ಸ್ಥಳೀಯ ಕಾಂಗ್ರೆಸ್ ಜನಸಂಪರ್ಕ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರೋಣ ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಸನ್ಮಾನ, ಬೇಡಿಕೆಯ ಮನವಿ ಸ್ವೀಕರಿಸಿ ಮಾತನಾಡಿದರು.
ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದ ಗರ್ಭಿಣಿಯರ ರಕ್ಷಣೆ ಮಾಡುವಲ್ಲಿ ಹಾಗೂ ಆರೋಗ್ಯ ರಕ್ಷಿಸುವಲ್ಲಿ ಹಗಲು ರಾತ್ರಿ ಎನ್ನದೇ ಸೇವೆಯಲ್ಲಿ ನಿರತರಾಗಿದ್ದಾರೆ. ಲಕ್ಷಾಂತರ ಜನರ ಬದುಕಿಗೆ ನೆರವಾದ ಆಶಾ ಕಾರ್ಯಕರ್ತೆಯರ ಬದುಕು ಮಾತ್ರ ಅತಂತ್ರ ಸ್ಥಿತಿಯಲ್ಲಿದೆ. ಖಾಯಂ ನೇಮಕಾತಿ ಇಲ್ಲದೇ ನಿರ್ದಿಷ್ಟ ವೇತನ ದೊರೆಯದೇ ಪರದಾಡುವುದನ್ನು ತಪ್ಪಿಸಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಅಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ರೇಣುಕಾ ನಾಗರಾಳ ಮಾತನಾಡಿ, ಹಿಂದೆ ಹಲವಾರು ಬಾರಿ ಹೋರಾಟ ಮಾಡಿದರೂ ನಮ್ಮ ಅಳಲಿಗೆ ಯಾರೂ ಸೂಕ್ತವಾಗಿ ಸ್ಪಂದಿಸಿಲ್ಲ. ರೋಣ ತಾಲೂಕಿನಲ್ಲಿ 600 ಕ್ಕೂ ಹೆಚ್ಚು ಜನ ಸೇರಿದಂತೆ ರಾಜ್ಯಾದ್ಯಂತ 30 ಸಾವಿರ ಆಶಾ ಕಾರ್ಯಕರ್ತೆಯರು ಸೇವೆಯಲ್ಲಿ ನಿರತರಾಗಿದ್ದಾರೆ. ಆದರೆ ಈ ಹಿಂದಿನ ಬಿಜೆಪಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ. ಪರ ರಾಜ್ಯದಂತೆ ನಮ್ಮ ರಾಜ್ಯದಲ್ಲಿಯೂ ಆಶಾ ಕಾರ್ಯಕರ್ತೆಯರ ಸೇವೆಯನ್ನು ಖಾಯಂಗೊಳಿಸಿ ಭದ್ರತೆ ಒದಗಿಸಿ ಕೊಡುವಂತೆ ವಿನಂತಿಸಿದರು.
ರೋಣ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ. ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯದೇ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತದೆ. ಅದರಂತೆ ಗಜೇಂದ್ರಗಡ ಸರ್ಕಾರಿ ಆಸ್ಪತ್ರೆ ಮತ್ತು ರೋಣ ತಾಲೂಕಿನ ಇತರೆ ಸರ್ಕಾರಿ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಉಳಿದುಕೊಳ್ಳಲು ಕೊಠಡಿ ವ್ಯವಸ್ಥೆ ಕಲ್ಪಿಸಲು ಶಾಸಕರಿಗೆ ತಿಳಿಸಿದರು. ನೂರಜಾನ ಮುಜಾವರ, ನಿರ್ಮಲಾ ಕರಬಿಸ್ತಿ, ಸರೋಜಾ ಚಿಲ್‌ಝರಿ, ಅಕ್ಕಮಹಾದೇವಿ ಪಟ್ಟಣಶೆಟ್ಟಿ, ಶಂಕ್ರಮ್ಮ ಹೊಸಳ್ಳಿ, ದೇವಕ್ಕ ಪಾಟೀಲ, ರೇಣುಕಾ ಗೊಳಿ, ಸುಶಿಲಾ ಬಾರಕೇರ ಮುಂತಾದವರು ಉಪಸ್ಥಿತರಿದ್ದರು.