ಕುಂಟುತ್ತ ಸಾಗಿದ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ
ಕನ್ನಡಪ್ರಭ ವಾರ್ತೆ, ರೋಣ, ಜೂ. 9
ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಮತ್ತು ಗ್ರಾಮೀಣ ಜನತೆಗೆ ಅನೂಕೂಲ ಕಲ್ಪಿಸುವ ದಿಶೆಯಲ್ಲಿ ಸರ್ಕಾರ ಕೋಟ್ಯಂತರ ಅನುದಾನ ಬಿಡುಗಡೆ ಗೊಳಿಸುತ್ತದೆ. ಆದರೆ, ಕೈಗೊಂಡ ಕಾಮಗಾರಿ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಲ್ಲಿ ಅನುದಾನ, ಸರ್ಕಾರದ ಪ್ರಯತ್ನ ನಿರರ್ಥಕ. ಅಂತಹ ದುಸ್ಥಿತಿ ರೋಣ ಪಟ್ಟಣದ ಹೈಟೆಕ್ ಬಸ್ ನಿಲ್ದಾಣಕ್ಕೆ ಬಂದಿದೆ.
ಡಾ. ನಂಜುಡಪ್ಪ ವರದಿ ಅನ್ವಯ ರೋಣದಲ್ಲಿ ಹಿಂದುಳಿದ ತಾಲೂಕು ಅಭಿವೃದ್ಧಿ ಅನುದಾನದಲ್ಲಿ ರು. 1.95 ಕೋಟಿ ವೆಚ್ಚದಲ್ಲಿ 11 ಅಂಕಣ (ಪ್ಲಾಟ್ ಫಾರಂ) ಒಳಗೊಂಡ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ 2011 ಆಗಸ್ಟ್ 16 ರಂದು ಅಂದಿನ ಶಾಸಕ ಕಳಕಪ್ಪ ಬಂಡಿ ಚಾಲನೆ ನೀಡಿದರು. 18 ತಿಂಗಳಲ್ಲಿ ಮುಗಿಯಬೇಕಿದ್ದ ನಿಲ್ದಾಣ ಕಾಮಗಾರಿ ಇಂದಿಗೂ ಅರ್ಧದಷ್ಟು ಮುಗಿಯದೇ ಕುಂಟುತ್ತಾ ಸಾಗಿದೆ.
ಪ್ರಯಾಣಿಕರಿಗೆ ಕಿರಿಕಿರಿ: ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭಿಸುವ ಮೊದಲು ಬಸ್ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು. ಇಲ್ಲಿ ಅದ್ಯಾವುದನ್ನು ಮಾಡದೇ ಕಾಮಗಾರಿ ಪ್ರಾರಂಭಿಸಲಾಗಿದೆ. ಬಸ್ಗಳು ರಸ್ತೆ ಮಧ್ಯೆ ಹಾಗೂ ಎಲ್ಲೆಂದರಲ್ಲಿ ನಿಲ್ಲುತ್ತವೆ. ಇದರಿಂದ ಪ್ರಯಾಣಿಕರು ತೊಂದರೆ ಎದುರಿಸುವಂತಾಗಿದೆ. ಇಲ್ಲಿಗೆ ಹೊರ ರಾಜ್ಯ ಮತ್ತು ವಿವಿಧ ಜಿಲ್ಲೆಗಳ ಬಸ್ ಸಂಚರಿಸುತ್ತವೆ. ಪ್ರಯಾಣಿಕರು ಹರಸಾಹಸಪಟ್ಟು ಬಸ್ ಹುಡುಕಬೇಕು. ಪ್ರಯಾಣಿಕರಿಗೆ, ಪಾದಾಚಾರಿಗಳಿಗೆ, ಶಾಲಾ ಮಕ್ಕಳಿಗೆ, ವೃದ್ಧರಿಗೆ, ಗರ್ಭಿಣಿಯರು ಬಸ್ ಹಿಡಿಯಲು ಹಾಗೂ ರಸ್ತೆ ದಾಟಲು ಪರದಾಡುತ್ತಿದ್ದಾರೆ. ಕಾಮಗಾರಿ ಪೂರ್ಣಗೊಳಿಸದೆ ವಿಳಂಬ ನೀತಿ ಅನುಸರಿಸಿದ ಗುತ್ತಿಗೆದಾರರಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಸಾರಿಗೆ ಬಸ್ಗಳು, ರಿಕ್ಷಾ, ಟಂಟಂ, ಕ್ರೂಸರ್ ಮತ್ತು ಟ್ಯಾಕ್ಸಿಗಳು ಪೈಪೋಟಿಗಿಳಿದಂತೆ ರಸ್ತೆಯ ಮಧ್ಯದಲ್ಲಿಯೇ ನಿಲ್ಲುತ್ತವೆ. ಕಿರಿದಾದ ರಸ್ತೆಯಲ್ಲಿ ಅಪಘಾತವಾಗುವ ಭೀತಿಯಲ್ಲೇ ಜನ ಸಂಚರಿಸುತ್ತಿದ್ದಾರೆ.
ವಿಳಂಬ ಏಕೆ? : ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ 8 ತಿಂಗಳಿನಿಂದ ಹುಬ್ಬಳ್ಳಿಯ ಸಾರಿಗೆ ಕೇಂದ್ರೀಯ ಕಚೇರಿಯ ಅಧಿಕಾರಿಗಳು ಬಿಲ್ ಪಾವತಿಸದಿರುವುದೇ ವಿಳಂಬಕ್ಕೆ ಕಾರಣವಾಗಿದೆ. ಕಾಮಗಾರಿ ಪ್ರಗತಿಯನ್ನು ಪ್ರತಿ ತಿಂಗಳು ಪರಿಶೀಲಿಸಿ ಹಣ ಬಿಡುಗಡೆ ಮಾಡಬೇಕು ಎಂಬ ನಿಯಮದಂತೆ ಕೇಂದ್ರೀಯ ಕಚೇರಿ ಅಧಿಕಾರಿಗಳಿಗೆ ಒತ್ತಾಯಿಸುತ್ತ ಬಂದಿದ್ದರೂ, ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ ಎಂಬುದು ಗುತ್ತಿಗೆದಾರರ ಆರೋಪವಾಗಿದೆ.
ಬಸ್ ನಿಲ್ದಾಣ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ರೋಣ ಸಾರಿಗೆ ಘಟಕಕ್ಕೆ ನಿತ್ಯ ಆದಾಯ ಕುಂಠಿತವಾಗುತ್ತಿದೆ. ತಾತ್ಕಾಲಿಕ ನಿಲುಗಡೆಗೆ ಪರ್ಯಾಯ ಮತ್ತು ಸೂಕ್ತ ಸ್ಥಳ ಇಲ್ಲದ್ದರಿಂದ ಬಂದಂತಹ ಪ್ರಯಾಣಿಕರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿಲ್ಲ. ಕಾಮಗಾರಿ ಪೂರ್ಣಗೊಳಿಸಲು ಗದಗ ವಿಭಾಗೀಯ ಕಚೇರಿಯಲ್ಲಿ ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ಒತ್ತಾಯಿಸುತ್ತಾ ಬರಲಾಗಿದೆ.
- ಅಶ್ರಫಅಲಿ
(ರೋಣ ಘಟಕದ ವಾಕರಸಾ ಸಂಸ್ಥೆ ವ್ಯವಸ್ಥಾಪಕ)
ನಿತ್ಯ ಕಿರಿಕಿರಿ ಅನುಭವಿಸುತ್ತಾ ಬಸ್ಗಾಗಿ ಬಿಸಿಲಲ್ಲಿಯೇ ನಿಲ್ಲಬೇಕು. ಬಸ್ ಯಾವಾಗ ಬರುತ್ತವೆಯೋ ಗೊತ್ತಾಗುತ್ತಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೆ ಬಸ್ಗೆ ಕಾಯಬೇಕು. ಕೂಡಲೇ ಈ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನೂಕೂಲ ಕಲ್ಪಿಸಬೇಕು.
ಸಿದ್ದು ಗುಡಿಮನಿ ಸಾ. ಹಿರೇಹಾಳ
ವೀರೇಶ ಅಡ್ನೂರ ಸಾ. ಹುಲ್ಲೂರ
ಬಸನಗೌಡ ಪ್ಯಾಟಿಗೌಡ್ರ. ಸಾ. ಹಿರೇಮಣ್ಣೂರ, ಅಮರೇಶ ಹದ್ಲಿ ಸಾ. ಹೊಸಳ್ಳಿ
(ಪ್ರಯಾಣಿಕರು)
ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರನ್ನು ಸಂಪರ್ಕಿಸಿ ಒತ್ತಾಯಿಸಲಾಗಿದ್ದು, ಬಿಲ್ ಪಾವತಿಸದೇ ಇರುವುದರಿಂದ ವಿಳಂಬ ಮಾಡಲಾಗಿದೆ ಎನ್ನುತ್ತಾರೆ. ಇದನ್ನು ಹುಬ್ಬಳ್ಳಿಯ ಕೇಂದ್ರೀಯ ವಾಯವ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಎ.ಎಂ. ಅಂಗಡಿ.
(ಗದಗ ವಿಭಾಗೀಯ ಸಾರಿಗೆ ಎಇಇ)
-ಪಿ.ಎಸ್. ಪಾಟೀಲ