ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸೌಲಭ್ಯವಿಲ್ಲದೆ ಸೊರಗಿದ ಬೂದಿಹಾಳ..!

Vishwanath S
Updated On : 10 Jun 2013, 11:17 am

ಕನ್ನಡಪ್ರಭ ವಾರ್ತೆ, ನರಗುಂದ, ಜೂ. 9
ತರಕಾರಿ ಪೂರೈಕೆ ಮಾಡುವ ಗ್ರಾಮವೆಂದು ಖ್ಯಾತಿ ಪಡೆದ ಬೂದಿಹಾಳ ಗ್ರಾಮ ಹಲವಾರು ವರ್ಷಗಳಿಂದ ಉತ್ತಮ ರಸ್ತೆಯ ಕೊರತೆಯಿಂದ ನಲುಗುತ್ತಿದೆ. ಇದಕ್ಕೆ ಶಾಶ್ವತ ಮುಕ್ತಿ ಕಲ್ಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ.
ತಾಲೂಕಿನ ಬೂದಿಹಾಳ ಗ್ರಾಮ ತಾಲೂಕಿನ ಇನ್ನುಳಿದ ಎಲ್ಲ ಗ್ರಾಮಗಳಿಗೆ ತರಕಾರಿ ಪೂರೈಕೆ ಮಾಡುತ್ತದೆ. ಈ ಗ್ರಾಮದ ಜನತೆ ತಮ್ಮ ತರಕಾರಿಯನ್ನು ಮಾರಾಟ ಮಾಡಲು ನರಗುಂದ ಪಟ್ಟಣಕ್ಕೆ ಬರಬೇಕು. ಆದರೆ ರಸ್ತೆ ದುಸ್ಥಿತಿಯಿಂದ ಸಾರ್ವಜನಿಕರು ಸಾಕಷ್ಟು ರೋಸಿ ಹೋಗಿ,  ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಅಭಿವೃದ್ಧಿಯನ್ನು ಮರೆತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸುತ್ತಾರೆ.
10 ವರ್ಷದಿಂದ ಉತ್ತಮ ರಸ್ತೆ ಕಂಡಿಲ್ಲ: ಮಲಪ್ರಭಾ ನದಿ ದಂಡೆ ಮೇಲಿರುವ ಈ ಗ್ರಾಮದಲ್ಲಿ ಬಹುತೇಕ ಕೃಷಿ ಕುಟುಂಬಗಳೇ ವಾಸವಾಗಿವೆ. ಬೆಳೆದ ತರಕಾರಿಯನ್ನು ನರಗುಂದ ಸೇರಿದಂತೆ ರಾಮದುರ್ಗ, ಸುರೇಬಾನ, ಶಿರೋಳ, ಬದಾಮಿ, ರೋಣದ ಸಂತೆಗಳಿಗೆ ಹೋಗಿ ಮಾರಾಟ ಮಾಡುವುದೇ ಇಲ್ಲಿನ ಮುಖ್ಯ ಉದ್ಯೋಗವಾಗಿದೆ. ಆದ್ದರಿಂದ ಬೆಳೆದ ತರಕಾರಿಯನ್ನು ಪಟ್ಟಣ ಪ್ರದೇಶಗಳಿಗೆ ಸಾಗಿಸಲು ರೈತರು ಹರಸಾಹಸ ಪಡುವಂತಾಗಿದೆ. 10 ವರ್ಷಗಳಿಂದ ಈ ಗ್ರಾಮ ಉತ್ತಮ ರಸ್ತೆಯನ್ನೇ ಕಂಡಿಲ್ಲ.
ಗ್ರಾಮಸ್ಥರ ಪ್ರಕಾರ ಈ ಗ್ರಾಮ ಇಲ್ಲಿವರೆಗೂ ಬಸ್ ಸೌಕರ್ಯವನ್ನೇ ಕಂಡಿಲ್ಲ. ಕೇವಲ ಚುನಾವಣೆ ಸಂದರ್ಭದಲ್ಲಿ ಮತಯಂತ್ರಗಳು ಹಾಗೂ ಮತದಾನ ಮಾಡಿದ ಮತಪೆಟ್ಟಿಗೆಗಳನ್ನು ತೆಗೆದುಕೊಂಡು ಹೋಗಲು ಮಾತ್ರ ಬಸ್‌ಗಳು ಗ್ರಾಮಗಳಿಗೆ ಬರುತ್ತವೆ. ಇನ್ನುಳಿದ ಸಂದರ್ಭದಲ್ಲಿ ಈ ಗ್ರಾಮಸ್ಥರಿಗೆ ಬಸ್ ಹತ್ತುವ ಭಾಗ್ಯವೇ ಇಲ್ಲ. ಪ್ರತಿದಿನ ಶಾಲೆ-ಕಾಲೇಜ್‌ಗೆ ಹೋಗುವ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ 2 ಕಿಮೀ ಕ್ರಮಿಸಬೇಕು. ಇಲ್ಲದಿದ್ದರೆ ಇವರಿಗೆಲ್ಲ ಶಿಕ್ಷಣ ಮರೀಚಿಕೆ.
ಬಸ್ ಸೌಕರ್ಯವಿಲ್ಲ
ಗ್ರಾಮ ಉದಯವಾದಾಗಿನಿಂದ ಇಲ್ಲಿವರೆಗೆ ಗ್ರಾಮಕ್ಕೆ ಬಸ್ಸಿನ ಸೌಕರ್ಯವಿಲ್ಲ. ಬಸ್ ಬರದಿದ್ದರೂ ಖಾಸಗಿ ವಾಹನದಲ್ಲಾದರೂ ಪ್ರಯಾಣಿಸೋಣ ಎಂದರೆ ಕಿತ್ತು ಹೋಗಿರುವ ರಸ್ತೆಯಲ್ಲಿ ಪ್ರಯಾಣಿಸುವವರ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
- ಉಮೇಶ ಮಾನೆ, ಗ್ರಾಮದ ಯುವಕ
ನಬಾರ್ಡ್ ಯೋಜನೆಯಡಿ ಡಾಂಬರೀಕರಣ
ಮುಂಬರುವ ದಿನಗಳಲ್ಲಿ ನರ್ಬಾಡ್ ಯೋಜನೆಯಡಿ ಈ ರಸ್ತೆಗೆ ರು. 70ರಿಂದ ರು. 80 ಲಕ್ಷ ಅನುದಾನ ಬಿಡುಗಡೆ ಮಾಡಿಸಿ ಡಾಂಬರೀಕರಣ ಮಾಡಲಾಗುವುದು. ರಸ್ತೆ ಕಾಮಗಾರಿಗೆ ಗುತ್ತಿಗೆದಾರರು ಮುಂದೆ ಬರದೇ ಇರುವುದರಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿ, ಸಾಧ್ಯವಾದಷ್ಟು ಬೇಗ ಗ್ರಾಮಕ್ಕೆ ಉತ್ತಮ ರಸ್ತೆ ನಿರ್ಮಿಸಿಕೊಡಲಾಗುವುದು.
- ವೈ.ವಿ. ಹುಣಸಿಕಟ್ಟಿ, ಜಿಪಂ ಅಧಿಕಾರಿ, ನರಗುಂದ

-ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement