ನಾರಾಯಣಗೌಡ ಜನ್ಮದಿನ: ರಕ್ತದಾನ
ಗದಗ: ಎಲ್ಲ ದಾನಗಳಲ್ಲಿ ರಕ್ತದಾನವು ಶ್ರೇಷ್ಠ. ರಕ್ತದಾನ ಮಾಡುವುದರಿಂದ ಮನುಷ್ಯನ ಜೀವ ಉಳಿಯುವುದು. ಅದಕ್ಕಾಗಿ ಅನ್ನದಾನಕ್ಕಿಂತಲೂ ಮಹಾದಾನವೆಂದರೆ ರಕ್ತದಾನ. ಅದಕ್ಕಾಗಿ ಪ್ರತಿಯೊಬ್ಬ ಸದೃಢ ಮಹಿಳೆ ಮತ್ತು ಪುರುಷರು ರಕ್ತದಾನ ಮಾಡುವುದು ಅವಶ್ಯ. ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ ಹೇಳಿದರು.
ಅವರು ಸೋಮವಾರ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 47ನೇ ಹುಟ್ಟುಹಬ್ಬದ ಅಂಗವಾಗಿ ಬೃಹತ್ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಜಯದೇವ ಬ್ಯಾಳಿ ಮಾತನಾಡಿ, ಕರವೇ ಕಾರ್ಯಕರ್ತರು ಯಾವಾಗಲೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇಂದು ತಮ್ಮ ನಾಯಕನ ಹುಟ್ಟು ಹಬ್ಬದ ದಿನಾಚರಣೆಯ ನಿಮಿತ್ತ ರಕ್ತದಾನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕರವೇಯ 50ಕ್ಕೂ ಹೆಚ್ಚು ಕಾರ್ಯಕರ್ತರು ರಕ್ತದಾನ ಮಾಡಿದರು. ಸಿದ್ದು ಅಂದಾನಗೌಡ, ನಿಂಗನಗೌಡ ಮಾಲಿಪಾಟೀಲ, ಅಶೋಕ ಅಣ್ಣಿಗೇರಿ, ಶರಣು ಗೋಡಿ, ಚನ್ನು ನಂದಿ, ಅಜಿಂ ಖಾಜಿ, ಉಮೇಶ ಮೇಟಿ, ಮೌಲಾಸಾಬ ಕುಂದಗೋಳ, ರಾಜು ಕಪ್ಪಣ್ಣನವರ, ಆನಂದ ಕೊಂಡಿ, ಮಾರುತಿ ಈಳಿಗೇರ, ರಘು ಕಡೇಮನಿ, ಜಲಂಧರ ಖಾಜಿ ಇದ್ದರು.