ಪ್ರಾಚಾರ್ಯರಿಗಿಲ್ಲಿ ಗುಮಾಸ್ತ ಕೆಲ್ಸ..!
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜೂ. 10
ಇಲ್ಲಗಳ ಕಂತೆಯಾಗಿರುವ ಪಟ್ಟಣದ ಬಿ.ಎಸ್.ಎಸ್. ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿಗೆ ಮೂಲ ಸೌಕರ್ಯ ಒದಗಿಸಿ, ಅಭಿವೃದ್ಧಿ ಪಡಿಸುವರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ.
ಎರಡು ಅಂತಸ್ತಿನ ಬೃಹತ್ ಕಟ್ಟಡ ಹೊಂದಿದ್ದರೂ, ಉಪನ್ಯಾಸಕರು, ಆಡಳಿತ ಸಿಬ್ಬಂದಿ, ಮೂಲ ಸೌಲಭ್ಯಗಳ ಜತೆ ಸೂಕ್ತ ನಿರ್ವಹಣೆ ಕೊರತೆ ಮಧ್ಯೆ ಕಾಲೇಜು ನರಳುತ್ತಿದೆ. ಸರ್ಕಾರ ಶೈಕ್ಷಣಿಕ ಪ್ರಗತಿಗೆ ರು. ಕೋಟ್ಯಂತರ ಹಣ ವಿನಿಯೋಗಿಸುತ್ತಿದೆ. ಆದರೆ ವಾಸ್ತವದಲ್ಲಿ ಸೌಕರ್ಯ ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ (ಡಿವೈಎಫ್ಐ) ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್ ಕಾರ್ಯಕರ್ತರು ದೂರುತ್ತಾರೆ.
ವಿದ್ಯಾರ್ಥಿಗಳ ಪರದಾಟ: ಕಾಲೇಜು ತರಗತಿ ಕೊಠಡಿಯಲ್ಲಿ ಸ್ವಚ್ಛತೆ ಕಡೆಗಣಿಸಲಾಗಿದೆ. ಕ್ರೀಡಾ ಸಾಮಾಗ್ರಿ ವಿದ್ಯಾರ್ಥಿಗಳಿಗೆ ಮರೀಚಿಕೆಯಾಗಿದೆ. ಕುಡಿವ ನೀರಿಲ್ಲ. ಗ್ರಂಥಾಲಯದಲ್ಲಿ ದಿನಪತ್ರಿಕೆ, ಮಾಸ ಪತ್ರಿಕೆ, ಪಠ್ಯಪುಸ್ತಕಗಳಿಲ್ಲ. ಶೌಚಾಲಯ ವ್ಯವಸ್ಥೆಯಿಲ್ಲ. ಕ್ರೀಡಾ ಮೈದಾನದಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ. ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಆಡಳಿತ ಇಚ್ಛಾಶಕ್ತಿ ಕೊರತೆಯಿಂದ ಕಾಲೇಜಿಗೆ ಮೂಲ ಸೌಕರ್ಯದ ಭಾಗ್ಯ ಇಲ್ಲ. ಕಾಲೇಜು ಆವರಣ ಸ್ವಚ್ಛ ಮಾಡದೇ ಕಸದ ತೊಟ್ಟಿಯಾಗಿದೆ. ಸರ್ಕಾರಿ ಕಾಲೇಜು ಬಗೆಗೆ ಯಾರಿಗೂ ಕಾಳಜಿ ಇಲ್ಲ. ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕವಿದ್ದರೂ ಸಮರ್ಪಕ ಬಳಕೆಯಿಲ್ಲ. ಕಾಲೇಜಿನಲ್ಲಿ ದೈಹಿಕ ಶಿಕ್ಷಕರಿದ್ದರೂ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ನಡೆಯುತ್ತಿಲ್ಲ. ಎಲ್ಲ ಕೊರತೆಯಿಂದ ವಿದ್ಯಾರ್ಥಿಗಳ ಪಾಡು ಅಧೋಗತಿಯಾಗಿದೆ.
ಈ ಎಲ್ಲ ಸಮಸ್ಯೆ ಬಗೆಹರಿಸಲು ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಸುಳ್ಳು ಕ್ರಿಮಿನಲ್ ಮೊಕದ್ದಮೆ
2000ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣವೊಡ್ಡಿ ಸರ್ಕಾರ ಈ ಕಾಲೇಜ್ನ್ನು ಮುಚ್ಚಲು ತೀರ್ಮಾನ ಕೈಗೊಂಡಿತ್ತು. ಈ ನಿರ್ಧಾರದ ವಿರುದ್ಧ ಸ್ಥಳೀಯ ಸಂಘಟನೆಗಳು, ಶಿಕ್ಷಣ ಪ್ರೇಮಿಗಳ ಹೋರಾಟದ ಫಲವಾಗಿ ಕಾಲೇಜನ್ನು ಉಳಿಸಿಕೊಳ್ಳಲಾಯಿತು. ಆಗ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂಘಟನೆಗಳ ಮುಖಂಡರ ವಿರುದ್ಧ ಸುಳ್ಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. ಈಗ ಮತ್ತೆ ಸಿಬ್ಬಂದಿ ಕೊರತೆಯಿಂದ ಅಂಥ ಸ್ಥಿತಿ ಗಜೇಂದ್ರಗಡದಲ್ಲಿ ನಿರ್ಮಾಣವಾಗಿದೆ.
ಸಿಬ್ಬಂದಿ ಕೊರತೆಯಿಂದ ಗುಮಾಸ್ತನಾಗಿದ್ದೇನೆ
ಕಾಲೇಜಿನ ಪ್ರಾಂಶುಪಾಲನಾಗಿದ್ದರೂ, ಗುಮಾಸ್ತ ಮಾಡುವ ಕೆಲಸವನ್ನು ನಾನೇ ಮಾಡಬೇಕಿದೆ. ಕಾರಣ ಆಡಳಿತ ಸಿಬ್ಬಂದಿ ಕೊರತೆ ಹಾಗೂ ಕೆಲ ವಿಷಯಗಳ ಉಪನ್ಯಾಸಕರ ಕೊರತೆಯಿದೆ.
- ಪಿ.ಎಚ್. ಕ್ಯಾರೆಕೊಪ್ಪ, ಕಾಲೇಜಿನ ಪ್ರಾಚಾರ್ಯ