ಅಭಿವೃದ್ಧಿಯೇ ಬಿಜೆಪಿ ಮೂಲ ಮಂತ್ರ
ಕನ್ನಡಪ್ರಭ ವಾರ್ತೆ, ಗದಗ, ಮಾ. 1
ಬಿಜೆಪಿ ಎಂದರೆ ಅಭಿವೃದ್ಧಿ, ಅಭಿವೃದ್ಧಿ ಎಂದಾಕ್ಷಣ ನೆನಪಾಗುವುದು ಬಿಜೆಪಿ. ಈ ಮಾದರಿಯಲ್ಲಿ ನಮ್ಮ ಸರ್ಕಾರ ಕಳೆದ 5 ವರ್ಷದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಯೋಜನೆಗಳ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ರಾಜ್ಯದ ಅಭಿವೃದ್ಧಿ ಬಯಸುವ ಪ್ರತಿಯೊಬ್ಬರೂ ಬಿಜೆಪಿಯನ್ನು ಮತ್ತೊಮ್ಮೆ ಬೆಂಬಲಿಸಲಿದ್ದಾರೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಸಾಧನೆ ಬಗ್ಗೆ ಮೆಚ್ಚುಗೆಯ ಮಾತುಗಳ ಮೂಲಕವೇ ಸಂದರ್ಶನ ನೀಡಿದ ಕರಿಗೌಡ್ರ, ಬಿಜೆಪಿಯು ನೀಡಿದ ಹೊಸ ಹೊಸ ಯೋಜನೆಗಳು, ಅದಕ್ಕಾಗಿ ಸೂಕ್ತ ಹಣಕಾಸಿನ ಕ್ರೂಢೀಕರಣ, ಚುನಾಯಿತ ಪ್ರತಿನಿಧಿಗಳಲ್ಲಿ ಬದ್ಧತೆ ಬೆಳೆಸುವ ರೀತಿ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ. ಅದನ್ನು ನಾವು ಕಳೆದ 5 ವರ್ಷದಲ್ಲಿ ಸಾಧಿಸಿ ತೋರಿಸಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಎನ್ನುವುದು ಪಕ್ಷಕ್ಕೆ ಬೇರು ಮಟ್ಟದ ಕಾರ್ಯಕರ್ತರನ್ನು ಒದಗಿಸುವುದಾಗಿದೆ. ಅದನ್ನು ಬಲಪಡಿಸಿದಲ್ಲಿ ಪಕ್ಷವು ಸಹಜವಾಗಿ ಬೆಳವಣಿಗೆ ಹೊಂದುತ್ತದೆ ಎಂದರು.
ಅದಕ್ಕಾಗಿಯೇ ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು ಜಿಲ್ಲೆಯ 203 ವಾರ್ಡ್ಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ಅಳೆದು ತೂಗಿ, ಅವರ ಪಕ್ಷ ನಿಷ್ಠೆ ಮತ್ತು ಸಂಘಟನೆಯ ಹಿನ್ನೆಲೆಯಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷವು ಸ್ಥಳೀಯ ಸಂಸ್ಥೆಗಳಿಗೆ ನೀಡಿದ ವಿಶೇಷ ಅನುದಾನದ ಮೂಲಕ ಆಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಾನದಂಡವಾಗಿಟ್ಟುಕೊಂಡು ನಾವು ಸಾರ್ವಜನಿಕರಲ್ಲಿ ಮತ ಕೇಳುತ್ತೇವೆ ಮತ್ತು ಅದರಲ್ಲಿ ಖಂಡಿತವಾಗಿಯೂ ಯಶಸ್ಸು ಸಾಧಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದರು. ಟಿಕೆಟ್ ಹಂಚಿಕೆಯಲ್ಲಿ ಉಂಟಾಗಿರುವ ಬಂಡಾಯದ ಶಮನಕ್ಕೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಕೇಳಿದಾಗ, ನಮ್ಮ ಪಕ್ಷದಲ್ಲಿ ಬಂಡಾಯವೇ ಇಲ್ಲ. ಆ ಮಾದರಿಯಲ್ಲಿಯೇ ನಾವು ಟಿಕೆಟ್ ಹಂಚಿಕೆ ಮಾಡಿದ್ದೇವೆ. ಕೆಲವೆಡೆ ಹೆಚ್ಚಿನ ಆಕಾಂಕ್ಷಿಗಳಿದ್ದು, ಆಯಾ ವಾರ್ಡ್ಗಳಲ್ಲಿ ನೇಮಕ ಮಾಡಲಾಗಿದ್ದ ಆಯ್ಕೆ ಸಮಿತಿಯಲ್ಲಿ ಯಾರನ್ನು ಅಂತಿಮಗೊಳಿಸಿದ್ದಾರೋ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ನಮ್ಮ ಅಭ್ಯರ್ಥಿಗಳಿಗೆ ತೊಂದರೆ ಇಲ್ಲ ಎಂದರು. ಜಿಲ್ಲೆಯ 3 ಜನ ಶಾಸಕರು ಕೆಜೆಪಿಯಲ್ಲಿ ಗುರುತಿಸಿಕೊಂಡು, ಸದ್ಯ ಬಿಜೆಪಿಯಲ್ಲಿ ಉಳಿದಿದ್ದು, ಇದರಿಂದ ಪಕ್ಷದಲ್ಲಿ ಅಸಮಾಧಾನವಿದೆಯೇ ಎಂದಾಗ, ಯಾವುದೇ ಅಸಮಾಧಾನವಿಲ್ಲ. ಈ ವಿಷಯದಲ್ಲಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ 'ಕನ್ನಡಪ್ರಭ'ಕ್ಕೆ ಈ ಮೊದಲು ನೀಡಿದ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಗ್ಗೆ ನಾನೇನೂ ಹೆಚ್ಚಿಗೆ ಹೇಳಲಾರೆ, ಆದರೆ ಕಾರ್ಯಕರ್ತರಲ್ಲಿ ಈ ವಿಷಯವಾಗಿ ಅಲ್ಪ ಮಟ್ಟಿನ ಗೊಂದಲ ಉಂಟಾಗಿತ್ತು, ಈಗ ಅದು ಶಮನವಾಗಿದೆ. ನಾವೆಲ್ಲಾ ಒಟ್ಟಾಗಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸುತ್ತೇವೆ. ಅದರಲ್ಲಿ ಜಯಶಾಲಿಯಾಗುತ್ತೇವೆ ಎಂದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಂಟಾದ ಗೊಂದಲ ಮತ್ತು ಭ್ರಷ್ಟಾಚಾರವನ್ನೇ ವಿರೋಧ ಪಕ್ಷಗಳು ಚುನಾವಣೆಯ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿವೆ. ಇದರಿಂದ ನಿಮ್ಮ ಪಕ್ಷಕ್ಕೆ ಹಾನಿಯಾಗುವುದಿಲ್ಲವೇ ಎಂದು ಕೇಳಿದಾಗ, ಹೌದು, ನೈಜ ಕಾರ್ಯಕರ್ತನಿಗೆ ನೋವುಂಟಾಗುತ್ತದೆ. ಆದರೆ, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ವಿರೋಧ ಪಕ್ಷಗಳು ಕಳೆದುಕೊಂಡಿವೆ. ಕೇಂದ್ರ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ಜನ ಮರೆತಿಲ್ಲ. ಇದಕ್ಕೆಲ್ಲಾ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆಂದರು.
- ಶಿವಕುಮಾರ ಕುಷ್ಟಗಿ