ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ: ಪಾಟೀಲ
ಗಜೇಂದ್ರಗಡ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಚುನಾವಣಾ ವೀಕ್ಷಕ ಎಸ್.ಜಿ. ಪಾಟೀಲ ಎಚ್ಚರಿಕೆ ನೀಡಿದರು.
ಅವರು ಗುರುವಾರ ಪಟ್ಟಣದ 23 ವಾರ್ಡ್ಗಳ 25 ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಕುರಿತು ಅಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಲಾಗಿದೆ. ಪರವಾನಗಿ ಇಲ್ಲದೆ ಮನೆ ಮೇಲೆ ಹಾಕಿರುವ ಪಕ್ಷದ ಧ್ವಜ, ಬ್ಯಾನರ್ ಪೋಸ್ಟರ್ ಬಂಟಿಂಕ್ಸ್ ತೆಗೆದು ಹಾಕಬೇಕು. ಆಟೋ ರಿಕ್ಷಾದಲ್ಲಿ ಧ್ವನಿವರ್ಧಕ ಮೂಲಕ ಚುನಾವಣಾ ನೀತಿ ಸಂಹಿತಿ ಪಾಲನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ಗುಂಪುಗಳ ಮಧ್ಯೆ ವೈರತ್ವ ಪ್ರೋತ್ಸಾಹಿಸಿದರೆ ಕಾಯ್ದೆ ಕಲಂ 125 ಅಡಿಯಲ್ಲಿ ನಡೆಸುವ ಚುನಾವಣೆಯಲ್ಲಿ ಜಾತಿ, ಧರ್ಮ, ಕುಲ ಅಥವಾ ಭಾಷೆಯ ಹೆಸರಿನಲ್ಲಿ 2 ಗುಂಪುಗಳು ಮಧ್ಯ ಶತ್ರುತ್ವ ಅಥವಾ ವೈರತ್ವ ಬೆಳೆಯುವಂತೆ ಮಾಡಿದರೆ ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅಂತಹ ಅಪರಾಧಕ್ಕೆ 3 ವರ್ಷ ಕಾರಾಗೃಹ ಶಿಕ್ಷೆ ಅಥವಾ ದಂಡ ಎರಡನ್ನು ವಿಧಿಸಲಾಗುವುದು.
ಯಾವುದೇ ವ್ಯಕ್ತಿಯು ಚುನಾವಣೆಗೆ ಸಂಬಂಧಿಸಿದಂತೆ ಕರಪತ್ರ ಅಥವಾ ಬ್ಯಾನರ್, ಪೋಸ್ಟರ್ ಮುದ್ರಿಸುವಾಗ ಅಂತಹ ವಸ್ತುಗಳ ಮೇಲೆ ಅದನ್ನು ಮುದ್ರಿಸಿದಂತಹ ಮುದ್ರಕನ ಹೆಸರು ಮತ್ತು ಆ ಮುದ್ರಣಾಲಯ ಹೆಸರು ಮತ್ತು ವಿಳಾಸ ಮುದ್ರಿಸಬೇಕು ಎಂದರು. ಡಿ. ಮೋಹನ, ಪುರಸಭೆ ಆರೋಗ್ಯ ನಿರೀಕ್ಷಕ ಮಹೇಶ ನಿಡಶೇಸಿ, ಎಂ.ಬಿ. ಒಂಟಿ, ಖಾಜಾಹುಸೇನ ಮಾಳೂರ ಮುಂತಾದವರು ಉಪಸ್ಥಿತರಿದ್ದರು.