ಅವರು ಸೀರೆ ಹಂಚುತ್ತಾರಂತೆ, ಇವರು ಹಣ ನೀಡಿದ್ದಾರಂತೆ !
ಕೇವಲ ಪ್ರಮುಖ ರಾಜಕೀಯ ನಾಯಕರ ಭೇಟಿಯಿಂದ ಮಾತ್ರವಲ್ಲ, ಈ ಬಾರಿಯ ಚುನಾವಣೆ ಅಂತೆ ಕಂತೆಗಳ ವಿಷಯದಲ್ಲಿಯೂ ಹೆಚ್ಚಿನ ಪ್ರಚಾರ ಪಡೆದಿದೆ. ಆ ಪಕ್ಷದವರು ಸೀರೆ ಹಂಚುತ್ತಾರಂತೆ, ಇವರ ಪಕ್ಷದಿಂದ ಸಾಕಷ್ಟು ಹಣ ನೀಡಿದ್ದಾರಂತೆ, ಈ ಪಕ್ಷದವರು ಸಾಕಷ್ಟು ಮದ್ಯವನ್ನು ಹಂಚುತ್ತಾರಂತೆ, ಈ ಪಕ್ಷದ ನಾಯಕರಿಗೆ ಕೋಟ್ಯಂತರ ರುಪಾಯಿ ಪಾರ್ಟಿ ಪಂಡ್ ನೀಡಿದ್ದಾರಂತೆ.... ಹೀಗೆ ವಿವಿಧ ಪಕ್ಷಗಳ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು ಅವಳಿ ನಗರದಲ್ಲಿ ಕೇಳಿಬರುತ್ತಿವೆ. ಈ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಗ್ರಾಮೀಣ ಭಾಷೆಯ ವಾಡಿಕೆಯ ಮಾತಿನಂತೆ, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎನ್ನುವುದು. ಈ ವಿಷಯದಲ್ಲಿ ಚುನಾವಣಾ ಸಿಬ್ಬಂದಿ, ಪೊಲೀಸ್ ಹಾಗೂ ಅಬಕಾರಿ ಇಲಾಖೆ ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ ಎನ್ನುವುದು ಮಾತ್ರ ಅಷ್ಟೇ ಸತ್ಯದ ಮಾತಾಗಿದೆ.