ಜನಪ್ರತಿನಿಧಿಗಳ ಚಿತ್ತ ಮತದಾರರತ್ತ
ಪಿ.ಎಸ್. ಪಾಟೀಲ್
ರೋಣ: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ರೋಣ ಪುರಸಭೆಗೆ ಲಗ್ಗೆ ಇಡಲು ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ನಾನಾ ರೀತಿಯ ತಂತ್ರಗಳ ಮೂಲಕ ಪ್ರಚಾರ ಕಾರ್ಯ ನಡೆಸುತ್ತಿದ್ದರೆ, ಕಾಂಗ್ರೆಸ್ ತನ್ನ ಅಸ್ತಿತ್ವ ಕಾಯ್ದುಕೊಳ್ಳಲು ಹೋರಾಟ ನಡೆಸುತ್ತಿದೆ.
ರೋಣ ಪುರಸಭೆಯು 23 ವಾರ್ಡ್ಗಳನ್ನು ಹೊಂದಿದೆ. ವಿವಿಧ ಪಕ್ಷಗಳಿಂದ ಒಟ್ಟು 67 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಹಲವೆಡೆ ನೇರ, ತ್ರಿಕೋನ ಹಾಗೂ ಚತುಷ್ಕೋನ ಸ್ಪರ್ಧೆಗಳು ಏರ್ಪಟ್ಟಿವೆ. ಪ್ರಮುಖ ಪಕ್ಷದ ಬಿ ಫಾರಂ ಪಡೆದ ಅಭ್ಯರ್ಥಿಗಳು ಪಕ್ಷದ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಮತದಾರರ ಮನೆ ಮನೆಗಳಿಗೆ ತೆರಳಿ ಮತದಾರರನ್ನು ಓಲೈಸುವಲ್ಲಿ ನಾನಾ ರೀತಿಯ ಕಸರತ್ತು ಮಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದಲೇ ಪ್ರಚಾರವನ್ನು ಶುರುವಿಟ್ಟುಕೊಂಡು ಮಧ್ಯಾಹ್ನದ ಬಿಸಿಲನ್ನು ಲೆಕ್ಕಿಸದೇ ವಾರ್ಡ್ಗಳನ್ನು ಸುತ್ತಿ ಮತ ಯಾಚನೆ ಮಾಡುತ್ತಿದ್ದಾರೆ.
ನಮಗೂ ಒಂದು ಅವಕಾಶ ಕೊಡಿ: ವಾರ್ಡ್ಗಳ ಮೂಲಭೂತ ಸಮಸ್ಯೆಗಳನ್ನು ಸಮರ್ಥ ರೀತಿಯಿಂದ ಪ್ರಾಮಾಣಿಕವಾಗಿ ಈಡೇರಿಸುತ್ತೇವೆ. ನಮಗೂ ಒಂದು ಅವಕಾಶ ಕೋಡಿ ಎಂದು ಹೊಸ ಮುಖಗಳು ವಿನಂತಿಸುವುದು ಕಂಡು ಬರುತ್ತಿದೆ. ಬಿಜೆಪಿಯು ಪ್ರ ಪ್ರಥಮವಾಗಿ ಪುರಸಭೆಯ ಗದ್ದುಗೆ ಏರಲು ತವಕಿಸುತ್ತಿದ್ದು, ಈ ಹಿಂದೆ ಕಾಂಗ್ರೆಸ್ ಅಧಿಕಾರಾವಧಿಯಲ್ಲಿನ ಲೋಪ ದೋಷಗಳನ್ನು ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತಿದೆ. ಕಾಂಗ್ರೆಸ್ ತಾನು ಮಾಡಿದ ಅಭಿವೃದ್ಧಿ ಕೆಲಸವನ್ನು ತೋರಿಸಿ, ಇನ್ನು ಹೆಚ್ಚಿನ ಅಭಿವೃದ್ದಿ ಕೈಗೊಳ್ಳಲಾಗುವುದು ಎನ್ನುತ್ತಾ ಪ್ರಚಾರ ಕಾರ್ಯ ಕೈಗೊಂಡಿದೆ.
ತೀವ್ರ ಪೈಪೋಟಿ: ಒಟ್ಟು 23 ವಾರ್ಡ್ಗಳಲ್ಲಿ ಪ್ರಮುಖ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿವೆ. ಹಲವು ವಾರ್ಡ್ಗಳಲ್ಲಿ ಹಳೆ ಹುಲಿಗಳು ಅಖಾಡಕ್ಕಿಳಿದಿದ್ದು, ತೀವ್ರ ತರಹದ ಪೈಪೋಟಿ ನಡೆದಿದೆ. ಕೆಲ ವಾರ್ಡ್ಗಳಲ್ಲಿ ಘಟಾನುಘಟಿಗಳಿದ್ದಾರೆ. ಸೋಲುಂಡು ಮುಖಭಂಗ ಅನುಭವಿಸುವ ಬದಲು, ಗೆಲುವಿಗಾಗಿ ಶ್ರಮಿಸೋಣ ಎನ್ನುವ ತವಕ ಎಲ್ಲರಲ್ಲಿಯೂ ಕಾಡುತ್ತಿದೆ. ವಾರ್ಡ್ 1,3,4,7,9, 10,15,16,18 ಮತ್ತು 23 ವಾರ್ಡ್ಗಳಲ್ಲಿ ಚುನಾವಣೆಯು ತೀವ್ರ ಜಿದ್ದಾಜಿದ್ದಿಯಿಂದ ಕೂಡಿದೆ.
ಭರವಸೆಯ ಮಹಾಪುರ: ಚುನಾವಣೆಗೆ ಕೇವಲ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇರುವುದರಿಂದ ಹಗಲು ರಾತ್ರಿ ಎನ್ನದೇ ಅಭ್ಯರ್ಥಿಗಳು ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಕರ ಪತ್ರಗಳನ್ನು ಹಿಡಿದು ಮತದಾರರಿಗೆ ಭರವಸೆಯ ಮಾಹಪುರ ಹರಿಸುತ್ತಿದ್ದಾರೆ. ಆದರೆ ಗುಟ್ಟು ಬಿಡದ ಪ್ರಜ್ಞಾವಂತ ಮತದಾರ ಮಾತ್ರ ಎಲ್ಲ ಅಭ್ಯರ್ಥಿಗಳ ಓಲೈಕೆಗೆ ತಲೆಯಾಡಿಸುತ್ತಿದ್ದಾನೆ.
ಕೆಲವರಿಗೆ ಸಮಸ್ಯೆಗಳ ಬಿಸಿ : ಭರವಸೆ ನೀಡಿ ಅಧಿಕಾರ ಅನುಭವಿಸಿದವರಿಗೆ ವಾರ್ಡಿನ ಜನತೆ ಸಮಸ್ಯೆಗಳ ಬಿಸಿ ತಟ್ಟಿಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳಾದ ಚರಂಡಿ, ಮಹಿಳಾ ಶೌಚಾಲಯ, ರಸ್ತೆ, ಕುಡಿಯುವ ನೀರು ಸೇರಿದಂತೆ ನಾನಾ ಸಮಸ್ಯೆಗಳನ್ನು ಮತ ಕೇಳಲು ಬಂದ ಅಭ್ಯರ್ಥಿಗಳ ಮುಂದಿಡುತ್ತಿದ್ದಾರೆ. ಕಳೆದ 4 ವರ್ಷಗಳಿಂದ ಕುಡಿಯುವ ನೀರಿಗಾಗಿ ತೀವ್ರ ಪರಿತಪಿಸುತ್ತಿದ್ದೇವೆ. ಇನ್ನು ಮುಂದಾದರೂ ಅದಕ್ಕೊಂದು ಶಾಶ್ವತ ಮುಕ್ತಿ ಕಲ್ಪಿಸಿ, ಮತ ಪಡೆದು ವಂಚಿಸದೇ ಪ್ರಾಮಾಣಿಕತೆಯಿಂದ ಜನ ಸೇವೆ ಮಾಡಿರಿ ಎಂದು ಜನರು ಅಭ್ಯರ್ಥಿಗಳಿಗೆ ತಾಕೀತು ಮಾಡುತ್ತಿದ್ದಾರೆ.