ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಂಗೇರುತ್ತಿರುವ ಚುನಾವಣೆ

Mainashree
Updated On : 3 Mar 2013, 11:45 am

ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 2
ಬೇಸಿಗೆಯ ಬಿಸಿಲಿನ ಪ್ರಖರತೆ ದಿನೇ ದಿನೇ ಹೆಚ್ಚುತ್ತಿದೆ. ಇದರೊಟ್ಟಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾವು ಏರುತ್ತಿದ್ದು, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಪ್ರಚಾರದ ಅಬ್ಬರವೂ ಜೋರಾಗಿಯೇ ನಡೆದಿದೆ. ಪ್ರಮುಖ ಮುಖಂಡರು ಜಿಲ್ಲೆಗೆ ಭೇಟಿ ನೀಡಿ, ಪ್ರಚಾರದಲ್ಲಿ ತೊಡಗಿದ್ದು, ಚುನಾವಣೆಯ ಅಖಾಡ ರಂಗೇರುತ್ತಿದೆ.
ಈ ಹಿಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯಾ ಕ್ಷೇತ್ರದ ಶಾಸಕರು, ಮಾಜಿ ಶಾಸಕರು ಜಿಲ್ಲೆಯ ಪ್ರಭಾವಿ ನಾಯಕರಷ್ಟೇ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಚುನಾವಣೆಯ ಪ್ರಾರಂಭದಲ್ಲಿಯೇ ಸ್ಟಾರ್ ಕ್ಯಾಂಪೇನರ್‌ಗಳ ವಾರ್ ಪ್ರಾರಂಭವಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿ ಮಾಜಿ ಸಿಎಂ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ, ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.
ಅಭ್ಯರ್ಥಿಗಳ ಪರ ಪ್ರಚಾರ: ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಲಿಂಗಾಯತ ಪ್ರಾಬಲ್ಯವಿದ್ದು, ಇಲ್ಲಿ ಜೆಡಿಎಸ್ ನೆಲೆಯೂರಲು ಹರಸಾಹಸ ಪಡುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಮಾಜಿ ಸಿಎಂ ಕುಮಾರಸ್ವಾಮಿ ಈಗಾಗಲೇ ಜಿಲ್ಲೆಯಲ್ಲಿ 2 ಸುತ್ತಿನ ಪ್ರಚಾರ ನಡೆಸಿದ್ದಾರೆ. ಪ್ರಮುಖ ಲಿಂಗಾಯತ ಮತಗಳನ್ನು ಸೆಳೆಯುವಲ್ಲಿ ಹೆಚ್ಚಿನ ಪ್ರಯತ್ನವನ್ನೇ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಮಾಜಿ ಸಿಎಂ, ಕೆಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ತಾವೇನು ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ ಜಿಲ್ಲೆಗೆ ಭೇಟಿ ನೀಡಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಕೆಜೆಪಿ ಪರ ಅಭ್ಯರ್ಥಿಗಳ ಗೆಲುವಿಗಾಗಿ ಮತಯಾಚನೆ ಮಾಡಿದ್ದು, ಚುನಾವಣೆ  ಕಣ ರಂಗೇರಲು ಕಾರಣವಾಗಿದೆ.
ರಾಷ್ಟ್ರೀಯ ಪಕ್ಷಗಳ ಅಬ್ಬರ: ಚುನಾವಣೆಯ ಪ್ರಚಾರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಕೂಡಾ ಹಿಂದೆ ಬಿದ್ದಿಲ್ಲ. ಸ್ಥಳೀಯ ಮಟ್ಟದ ನಾಯಕರು ಕೇಂದ್ರ ಸ್ಥಾನವನ್ನು ಬಿಟ್ಟು ಅಲುಗಾಡದೇ ಅಭ್ಯರ್ಥಿಗಳ ಗೆಲುವಿಗಾಗಿ ರಾತ್ರಿಯವರೆಗೂ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಮಾಜಿ ಸಚಿವ ಎಚ್.ಕೆ. ಪಾಟೀಲ, ಜಿ.ಎಸ್. ಪಾಟೀಲ, ಬಿ.ಆರ್. ಯಾವಗಲ್ಲ ಈಗಾಗಲೇ ಒಂದು ಸುತ್ತಿನ ಪ್ರಚಾರವನ್ನು ಪೂರ್ಣಗೊಳಿಸಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ, ಮಾಜಿ ಸಚಿವ ಸಿ.ಸಿ. ಪಾಟೀಲ, ಶಾಸಕರಾದ ರಾಮಣ್ಣ ಲಮಾಣಿ, ಶ್ರೀಶೈಲಪ್ಪ ಬಿದರೂರ ಅಭ್ಯರ್ಥಿಗಳೊಂದಿಗೆ ಮತದಾರರ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.
ಬಿಎಸ್‌ಆರ್‌ಗೆ ಅಗ್ನಿಪರೀಕ್ಷೆ: ಗದಗ ಜಿಲ್ಲೆಯ ಮಟ್ಟಿಗೆ ರಾಜಕೀಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ್ದ ಬಿ.ಶ್ರೀರಾಮುಲು ತಮ್ಮ ಬಿಎಸ್‌ಆರ್ ಅಭ್ಯರ್ಥಿಗಳ ಪರವಾಗಿ ಶುಕ್ರವಾರ ಮತ್ತು ಶನಿವಾರ ಬಿರುಸಿನ ಪ್ರಚಾರ ಮಾಡಿದ್ದು, ಅಲ್ಲಲ್ಲಿ ರೋಡ್ ಶೋಗಳನ್ನು ನಡೆಸುವ ಮೂಲಕ ಯುವಕರಲ್ಲಿ ಉತ್ಸಾಹಕ್ಕೆ ಕಾರಣವಾಗಿದ್ದಾರೆ. ಶ್ರೀರಾಮುಲು ಗದಗ ಮಟ್ಟಿಗೆ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದು, ಅವರು ಬಿಜೆಪಿಯಿಂದ ಹೊರ ಬಂದು ಬಿಎಸ್‌ಆರ್ ಕಾಂಗ್ರೆಸ್ ಸ್ಥಾಪನೆ ಮಾಡಿದ ನಂತರ ಗದಗ ನಗರದಲ್ಲಿ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಶ್ರೀರಾಮುಲು ಹಾಗೂ ಬಿಎಸ್‌ಆರ್‌ಗೆ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿದ್ದು ಮತದಾರ ಅವರಿಗೆ ಎಷ್ಟು ಅಂಕ ನೀಡುತ್ತಾನೋ ಎಂಬುವುದನ್ನು ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement