ಉತ್ತಮ ಮನೋಭಾವ ಬೆಳೆಸಿಕೊಳ್ಳಿ: ಪಾಟೀಲ
ನರಗುಂದ: ಪ್ರತಿಯೊಂದು ಶಾಲಾ ವಿದ್ಯಾರ್ಥಿಗಳು ತಮ್ಮ ವರ್ಗದಲ್ಲಿ ಉತ್ತಮ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಹೆತ್ತವರಿಗೆ ಮತ್ತು ಶಿಕ್ಷಕರಿಗೆ ಗೌರವ ತರಲು ಸಾಧ್ಯವಾಗುತ್ತದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಿ.ಜಿ. ಪಾಟೀಲ ಹೇಳಿದರು.
ಈಚೆಗೆ ಅವರು ತಾಲೂಕಿನ ರಡ್ಡೇರನಾಗನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷರಾದವರು ಪ್ರತಿಯೊಂದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಿ, ನೀವು ನೀಡುವ ಶಿಕ್ಷಣದಿಂದ ಆ ಮಗು ಈ ದೇಶಕ್ಕೆ ಉತ್ತಮ ನಾಗರಿಕನಾಗಲು ಸಾಧ್ಯವಾಗುತ್ತದೆ ಎಂದರು.
ಶಿಕ್ಷಕ ಎಂ.ಬಿ. ಯಂಡಿಗೇರಿ ಮಾತನಾಡಿ, ವಿಜ್ಞಾನಿಗಳ ಸಾಧನೆಯನ್ನು ಸ್ಮರಿಸಬೇಕು. ಅವರು ಅನುಸರಿಸಿದ ಮಾರ್ಗಗಳನ್ನು ಮಕ್ಕಳು ಅನುಸರಿಸಲು ಮುಂದಾಗಬೇಕು. ಸರ್ ಸಿ.ವಿ. ರಾಮನ ಅವರು ಶ್ರದ್ಧೆ, ಆಸಕ್ತಿ, ಛಲದಿಂದ ದೇಶಕ್ಕೆ ದೊಡ್ಡ ಸಾಧನೆ ಮಾಡಿದ್ದಾರೆ. ಅಂಥಹ ಸಾಧನೆಯನ್ನು ವಿದ್ಯಾರ್ಥಿಗಳು ಮಾಡಲು ಮುಂದಾಗಬೇಕು ಎಂದರು. ಶಿಕ್ಷಕ ಎಸ್.ಆರ್. ಬನ್ನಿಗಿಡದ, ಜಿ.ಬಿ. ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅನಸೂಯಾ, ಸುರೇಶ ಗುಡಗಾಪುರ ಮುಂತಾದವರು ಉಪಸ್ಥಿತರಿದ್ದರು.