ಚುರುಮರಿ ಚಹಾಕ್ಕೆ ಬರವಿಲ್ಲ ಹಣ-ಹೆಂಡ ಕೇಳಂಗಿಲ್ಲ
- ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ಚುನಾವಣೆ ಎಂದರೆ ಹಣ, ಹೆಂಡದ ಹೊಳೆ ಹರಿಯಲೇಬೇಕು. ಬಾಡೂಟವಂತೂ ಕಡ್ಡಾಯ. ಸೀರೆ, ವಸ್ತ್ರಗಳ ವಿತರಣೆ ಮಾಮೂಲು. ಇದೆಲ್ಲ ಇಲ್ಲದಿದ್ದರೆ ಚುನಾವಣೆಗೆ ರಂಗು ಬರುವುದೇ ಇಲ್ಲ ಎನ್ನುವ ವಾತಾವರಣ ಎಲ್ಲೆಡೆ ಕಾಣಿಸುತ್ತದೆ.
ಇದಕ್ಕೆಲ್ಲ ಅಪವಾದ ಎಂಬಂತೆ ಇಲ್ಲೊಂದು ವಾರ್ಡ್ನ ಜನರು ಅಭ್ಯರ್ಥಿಗಳ ದುಂದುವೆಚ್ಚಕ್ಕೆ ಬ್ರೇಕ್ ಹಾಕಿದ್ದಾರೆ. ಕಡಿಮೆ ವೆಚ್ಚದಲ್ಲಿ ಚುನಾವಣೆ ಎದುರಿಸಬಹುದು ಎನ್ನುವುದನ್ನು ಅಕ್ಕಪಕ್ಕದ ವಾರ್ಡ್ಗಳಿಗೆ ತೋರಿಸಿಕೊಡುತ್ತಿದ್ದಾರೆ. ಮೇಲ್ನೋಟಕ್ಕೆ ಆಶ್ಚರ್ಯವೆಣಿಸಿದರೂ ಇದು ಸತ್ಯ. ಇಲ್ಲಿ ಚುನಾವಣೆಯ ನೆಪದಲ್ಲಿ ಜನರು ಅಭ್ಯರ್ಥಿಗಳಿಂದ ಹಣ ಸುಲಿಗೆ ಮಾಡುವುದಿಲ್ಲ. ಗುಡಿ-ಗುಂಡಾರಗಳಿಗೆ ಕಾಣಿಕೆಯನ್ನು ಎತ್ತುವುದಿಲ್ಲ. ವಾರ್ಡ್ನ ಜನರೆಲ್ಲ ಸೌಹಾರ್ದದಿಂದ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತಾರೆ.
17ನೇ ವಾರ್ಡ್: ಇದು ಪಟ್ಟಣದ ವಿದ್ಯಾನಗರ, ನವನಗರ, ಶಬ್ಬೀರ ಕಾಲೋನಿ, ಫಕೀರೇಶ್ವರ ನಗರ ವ್ಯಾಪ್ತಿಗೆ ಬರುವ 17ನೇ ವಾರ್ಡ್ನ ಚುನಾವಣೆಯ ನೋಟ. 325 ಪುರುಷರು, 286 ಮಹಿಳೆಯರು ಒಟ್ಟು 611 ಮತದಾರರು ಇರುವ ಈ ವಾರ್ಡ್ನಲ್ಲಿ ಸದ್ಯ 5 ಜನರು ಚುನಾವಣಾ ಕಣದಲ್ಲಿ ಉಳಿದಿದ್ದು, ಜೆಡಿಎಸ್, ಬಿಜೆಪಿ, ಕಾಂಗ್ರೆಸ್, ಬಿಎಸ್ಆರ್, ಕೆಜೆಪಿ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಯಲ್ಲಿದ್ದಾರೆ. ಆದರೆ, ಇವರೆಲ್ಲರೂ ದ್ವೇಷ ರಹಿತವಾಗಿ ಚುನಾವಣೆ ಎದುರಿಸುತ್ತಿರುವುದು ವಾರ್ಡ್ನ ವಿಶೇಷತೆಯಾಗಿದೆ.
ಈ ಸಾಮರಸ್ಯದ ಚುನಾವಣೆ ಪಪಂಗೆ ಮಾತ್ರ ಸೀಮಿತ. ಉಳಿದಂತೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಅನ್ವಯಿಸುವುದಿಲ್ಲ. ಆಗೆಲ್ಲ ಉಳಿದ ವಾರ್ಡ್ಗಳಲ್ಲಿ ನಡೆಯುವಂತೆ ಇಲ್ಲಿಯೂ ಎಲ್ಲ ಮೋಜು-ಮಜಲುಗಳಿಗೆ ಕೊರತೆಯಿಲ್ಲ. ವಿವಿಧ ಪಕ್ಷಗಳಿಂದ ದುಡ್ಡು ಪಡೆಯುವುದನ್ನು ಬಿಡುವುದಿಲ್ಲವೆಂದು ನವನಗರ ಮತ್ತು ಫಕೀರೇಶ್ವರ ನಗರದ ಕೆಲವರು ಹೇಳುತ್ತಾರೆ. ಪಪಂಗೆ ಸ್ಪರ್ಧಿಸಿರುವ ಬಹುತೇಕ ಅಭ್ಯರ್ಥಿಗಳು ತಮ್ಮ ಬೆಂಬಲಿಗರಿಗೆ ನಿತ್ಯ ಚುರುಮರಿ (ಮಂಡಾಳ) ಮತ್ತು ಚಹಾ ಪಾರ್ಟಿ ವ್ಯವಸ್ಥೆ ಮಾಡಿದ್ದಾರೆ.
ಹಿಂದಿನಿಂದಲೂ ಬಂದ ಪದ್ಧತಿ: ನಮ್ಮ ವಾರ್ಡ್ನಲ್ಲಿ ಹಿಂದಿನಿಂದಲೂ ಹೀಗೆ ನಡೆದುಕೊಂಡು ಬಂದಿದೆ. ಇಲ್ಲಿ ಮನೆ ಪಟ್ಟಿ ಕಟ್ಟಿ ಚುನಾವಣೆಗೆ ನಿಲ್ಲೋದೇ ಕಷ್ಟವಾಗಿರುತ್ತೆ. ಅಂಥದ್ದರಲ್ಲಿ ಹಣದ ಹೊಳೆ ಎಲ್ಲಿಂದ ಹರಿಸೋದು ಎಂದು ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಲಲಿತಾ ರಮೇಶ ಕಲ್ಲಪ್ಪನವರ ಹೇಳಿದರು. ಈ ವಾರ್ಡ್ನಲ್ಲಿ ಚುನಾವಣಾ ಕಾವು ಅಷ್ಟೊಂದು ಇಲ್ಲ. ಏನೋ ಎಲೆಕ್ಷನ್ ಮಾಡ್ಬೇಕು, ಮಾಡ್ತೀವಿ. ತಂಟೆ ತಕರಾರು ಇಲ್ಲ. ಜನರಿಗೆ ಯಾರು ಬೇಕು ಅವರಿಗೆ ಮತ ಹಾಕುತ್ತಾರೆ. ಅದೇ ನೆಪದಲ್ಲಿ ಅಭ್ಯರ್ಥಿಗಳಿಂದ ದುಂದು ವೆಚ್ಚ ಮಾಡಿಸುವುದಿಲ್ಲ ಎಂದು ವಾರ್ಡ್ನ ಹಿರಿಯರು ತಿಳಿಸುತ್ತಾರೆ.
ದುಂದುವೆಚ್ಚ ಎಲ್ಲಿಂದ ಮಾಡೋದು?ಚುನಾವಣೆಯಲ್ಲಿ ಯಾರೇ ಗೆದ್ದರೂ-ಸೋತರೂ ಪರವಾಗಿಲ್ಲ. ಅಭ್ಯರ್ಥಿಗಳಿಗೆ ಹೊರೆಯಾಗದಂತೆ ಕಡಿಮೆ ಖರ್ಚಿನಲ್ಲಿ ಚುನಾವಣೆ ಮಾಡ್ತೀವಿ. ಚುರುಮರಿ ಚಹಾಗೆ ಕೊರತೆ ಇಲ್ಲ ಎನ್ನುತ್ತಾರೆ ಮುಖಂಡರು. ಹೊಲದಲ್ಲಿ ಕೆಲಸ ಮಾಡೋರು ನಾವು. ದುಂದುವೆಚ್ಚ ಎಲ್ಲಿಂದ ಮಾಡೋದು. ಕಡಿಮೆ ವೆಚ್ಚದಲ್ಲಿ ನಮ್ಮ ಚುನಾವಣೆ ಮುಗಿಯುತ್ತೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಚುನಾವಣೆ ಅಂದ್ರೆ ಖರ್ಚು ಇದ್ದೇ ಇರುತ್ತೇ. ಏನೋ ಇದ್ದುದರಲ್ಲಿ ಎಷ್ಟು ಕಡಿಮೆ ಮಾಡೋಕಾಗುತ್ತೋ ಅಷ್ಟು ಮಾಡ್ತೀವಿ. ಏನು ಖರ್ಚು ಮಾಡೋದಿಲ್ಲ ಅಂದ್ರೆ ಸುಳ್ಳು ಹೇಳಿದಂಗ ಆಗುತ್ತೆ ಎನ್ನುವುದು ಕೆಲವರ ಅಭಿಪ್ರಾಯ.