ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮತ್ತೆ ಕಾಂಗ್ರೆಸ್ ಪಾರುಪತ್ಯ

Lingaraj Badiger
Updated On : 4 Mar 2013, 12:15 pm

ಗದಗ: ರೋಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗಜೇಂದ್ರಗಡ ಮತ್ತು ರೋಣ ಪುರಸಭೆ ಹಾಗೂ ನರೇಗಲ್ಲ ಪಟ್ಟಣ ಪಂಚಾಯ್ತಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಶಾಸಕ ಜಿ.ಎಸ್. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ 'ಕನ್ನಡಪ್ರಭ' ನಡೆಸುತ್ತಿರುವ ಸಂದರ್ಶನ ಮಾಲಿಕೆಯನ್ನು ನಾನು ಓದುತ್ತಾ ಬಂದಿದ್ದೇನೆ. ಚುನಾವಣೆಯ ವಿಷಯದಲ್ಲಿ ಪತ್ರಿಕೆಯು ತನ್ನ ಪಾತ್ರವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದೆ. ಅದಕ್ಕಾಗಿ ಮೊದಲು ನಿಮ್ಮ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು 'ಕನ್ನಡಪ್ರಭ' ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದ ನಂತರ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ವಿಶೇಷವಾಗಿತ್ತು.
ಪುರಸಭೆ, ಪಟ್ಟಣ ಪಂಚಾಯ್ತಿಗಳು ಎಂದರೆ ಬೇರು ಮಟ್ಟದ ಕಾರ್ಯಕರ್ತರನ್ನು ಗಟ್ಟಿಗೊಳಿಸಿ, ಅವರಿಗೆ ಪಕ್ಷ ಅಧಿಕಾರವನ್ನು ನೀಡಿ, ರಾಜಕೀಯ ಕ್ಷೇತ್ರದಿಂದ ದೂರು ಸರಿಯುತ್ತಿರುವ ಪ್ರಜ್ಞಾವಂತ ಯುವಕರನ್ನು ರಾಜಕೀಯ ರಂಗದಲ್ಲಿ ಕರೆ ತರುವುದಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಈ ವಿಷಯದಲ್ಲಿ ಯುವ ನಾಯಕ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿಯೇ ಈ ಬಾರಿ ಸ್ಥಳೀಯ ಸಂಸ್ಥೆಗಳಿಗೆ ಟಿಕೆಟ್ ಹಂಚಲಾಗಿದೆ. ಒಮ್ಮೆ ನೀವು ಕಾಂಗ್ರೆಸ್ ಟಿಕೆಟ್ ಪಡೆದವರನ್ನು ಗಮನಿಸಿದಲ್ಲಿ, ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದು ಬರುತ್ತದೆ.
ರೋಣ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ಪಕ್ಷದ ಬಗ್ಗೆ ಜನರಲ್ಲಿ ತೀವ್ರ ಬೇಸರದ ಭಾವನೆ ವ್ಯಕ್ತವಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರಕ್ಕೆ ತೆರಳಿದ ಪ್ರತಿಯೊಬ್ಬರಿಗೂ ಆಡಳಿತಾರೂಡ ಪಕ್ಷದ ಬಗ್ಗೆ ಹೊಂದಿರುವ ಅಭಿಪ್ರಾಯ ಸ್ಪಷ್ಟವಾಗುತ್ತದೆ. ಈ ಸರ್ಕಾರದ ಆಡಳಿತ ವೇಳೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಮಾಡಿದ್ದೇವೆ ಎನ್ನುವ ಇವರು, ಈ ಕುರಿತು ಸಾರ್ವಜನಿಕರಿಗೆ ಸ್ಪಷ್ಟವಾದ ಲೆಕ್ಕ ಕೊಡಬೇಕಿದೆ ಎಂದರು.
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿಗಾಗಿ ನೀಡಿದ ಅನುದಾನದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ರೈತರ ಮೇಲಿನ ಗೋಲಿಬಾರ್, ನೈಸರ್ಗಿಕ ಸಂಪನ್ಮೂಲದ ಲೂಟಿ ಇವುಗಳೇ ಬಿಜೆಪಿಯವರ ಸಾಧನೆಗಳಾಗಿವೆ ಎಂದು ಲೇವಡಿ ಮಾಡಿದರು. ಇನ್ನು ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ಹಾಲಿ ಸಚಿವರು ರೋಣ ಪಟ್ಟಣವನ್ನು ಕಡೆಗಣಿಸುತ್ತಾ ಬಂದಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ, ಇದರ ಬಗ್ಗೆ ನಾನೇನೂ ಹೇಳಲಾರೆ. ಜನತೆಯೇ ಹೇಳುತ್ತಿದ್ದಾರೆ ಎನ್ನುವುದಾದರೆ ಮತ್ತೆ ಅದನ್ನು ನಾನು ಸ್ಪಷ್ಟಪಡಿಸುವ ಅಗತ್ಯತೆ ಇಲ್ಲ ಎನ್ನುವ ಜಾಣ್ಮೆಯ ಉತ್ತರವನ್ನು ನೀಡಿದರು. ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೋಲಿಕೆ ಮಾಡಲು ಯಾವ ಪಕ್ಷಗಳಿಲ್ಲ. ಪ್ರಾದೇಶಿಕ ಪಕ್ಷಗಳ ಬಗ್ಗೆಯಂತೂ ನಾನು ಹೆಚ್ಚಿನ ಅಭಿಪ್ರಾಯ ವ್ಯಕ್ತಪಡಿಸಲಾರೆ. ಯಾಕೆಂದರೆ ಕೆಲ ಪ್ರಾದೇಶಿಕ ಪಕ್ಷಗಳು ಎಲ್ಲ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲವೆಂದ ಮೇಲೆ ಅವರು ನಮಗೆ ಯಾವ ರೀತಿಯಲ್ಲಿ ಪೈಪೋಟಿ ನೀಡಲು ಸಾಧ್ಯ. ಹಾಗಾಗಿ ನಮ್ಮ ನೇರ ಎದುರಾಳಿ ಬಿಜೆಪಿ ಎಂದರು.
ಬಿಜೆಪಿ ಒಡೆದ ಮನೆ: ಒಡೆದ ಮನೆಯಾಗಿರುವ ಬಿಜೆಪಿಯ ಬಗ್ಗೆ ನಾನೇನೂ ಮಾತನಾಡಲು ಇಚ್ಛಿಸುವುದಿಲ್ಲ. 5 ವರ್ಷದಲ್ಲಿ ರಾಜ್ಯದ ಅಭಿವೃದ್ದಿಗೆ ಬಿಜೆಪಿಯ ದುರಾಡಳಿತದಿಂದ ಸಾಕಷ್ಟು ಹಿನ್ನೆಡೆಯಾಗಿರುವುದಂತೂ ಸತ್ಯ. ಅದು ಇಲ್ಲಿಯವರೆಗೆ ಕೇವಲ ಜನರ ಮಾತುಗಳಲ್ಲಿ ಮಾತ್ರ ಕೇಳಿ ಬರುತ್ತಿತ್ತು. ಆದರೆ ಈ ಸ್ಥಳೀಯ ಚುನಾವಣೆಯ ಮೂಲಕ ಜನತೆ ಆ ಪಕ್ಷವನ್ನು ತಿರಸ್ಕರಿಸಲಿದ್ದಾರೆ. ಸುಭದ್ರ ಮತ್ತು ಉತ್ತಮ ಆಡಳಿತಕ್ಕಾಗಿ ನಾವೆಲ್ಲಾ ಕಾಂಗ್ರೆಸ್ ಬೆಂಬಲಿಸೋಣ ಎನ್ನುವ ಗಟ್ಟಿ ಭಾವನೆ ಮತದಾರರಲ್ಲಿ ಮೂಡಿದೆ. ಅದು ಮಾ. 11 ಫಲಿತಾಂಶದ ದಿನದಂದು ಬಹಿರಂಗಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement