ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಾಜಿ ಸಚಿವರ ತಂತ್ರ-ಪ್ರತಿತಂತ್ರ

Lingaraj Badiger
Updated On : 4 Mar 2013, 12:28 pm

- ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ, ನರಗುಂದ, ಮಾ. 3
ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ನರಗುಂದ ಪುರಸಭೆ ಚುನಾವಣೆ ದಿನೇ ದಿನೇ ರಂಗೇರುತ್ತಿದೆ.
ಮತದಾರರು ಯಾವ ಪಕ್ಷ ಅಧಿಕಾರಕ್ಕೆ ತರಬೇಕೆಂದು ಚಿಂತೆಯಲ್ಲಿರುವುದು ಒಂದೆಡೆಯಾದರೆ, ವಿವಿಧ ಪಕ್ಷದ ಮುಖಂಡರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ರಣ ತಂತ್ರದಲ್ಲಿ ಮುಳಗಿದ್ದಾರೆ.
ಈ ಕ್ಷೇತ್ರದಲ್ಲಿರುವ ಇಬ್ಬರು ಮಾಜಿ ಸಚಿವರಂತೂ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ತಂತ್ರ, ಪ್ರತಿ ತಂತ್ರದಲ್ಲಿ ಜೋರಾಗಿಯೇ ತೊಡಗಿದ್ದಾರೆ.
ಪಟ್ಟಣದ ಅಭಿವೃದ್ಧಿ: ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ. ಪಾಟೀಲ ತಮ್ಮ 2 ಅವಧಿಯ ಅಧಿಕಾರಾವಧಿಯಲ್ಲಿ ಪಟ್ಟಣಕ್ಕೆ ನೂರಾರು ಕೋಟಿ ಅನುದಾನ ತಂದು ಸಮಗ್ರ ಪಟ್ಟಣ ಸೇರಿದಂತೆ, ಇತಿಹಾಸ ಹೊಂದಿರುವ ಕೆಂಪಗಿಸಿ ಬಾಗಿಲನ್ನು ಆಧುನಿಕವಾಗಿ ಅಭಿವೃದ್ಧಿಗೊಳಿಸಿ ಮತ್ತು ಕುಡಿಯುವ ನೀರಿಗೆ ಹಲವಾರು ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡುವಲ್ಲಿ ಶ್ರಮಿಸಿದ್ದಾರೆ. ಒಂದು ಸಮಯದಲ್ಲಿ ನರಗುಂದ ಪಟ್ಟಣದಲ್ಲಿ ಸರಿಯಾದ ರಸ್ತೆಯಿರಲಿಲ್ಲ. ಅಂತಹ ಎಲ್ಲ ರಸ್ತೆಗಳನ್ನು ಇಂದು ಕಾಂಕ್ರೀಟ್ ಮತ್ತು ಡಾಂಬರೀಕರಣ ಮಾಡಿ ಇಡೀ ಪಟ್ಟಣವನ್ನೆ ಬದಲಾವಣೆ ಮಾಡುವಲ್ಲಿ ಪ್ರಯತ್ನಿಸಿದ್ದಾರೆ.
ವೈಪಲ್ಯಗಳ ಲಾಭ: ಮಾಜಿ ಸಚಿವ ಬಿ.ಆರ್. ಯಾವಗಲ್ ಈ ಕ್ಷೇತ್ರವನ್ನು 4 ಬಾರಿ ಪ್ರತಿನಿಧಿಸಿ, ರೈತ ಪರ ಹೋರಾಟ ಮಾಡಿದ ನಾಯಕನಾಗಿದ್ದು, ಮೇಲಾಗಿ ಈ ಕ್ಷೇತ್ರದಲ್ಲಿ ತನ್ನದೇಯಾದ ಪ್ರಾಮಾಣಿಕ ಬೆಂಬಲಿಗರನ್ನು ಹೊಂದಿದ್ದಾರೆ. ಕಳೆದ ಪುರಸಭೆ ಅಧ್ಯಕ್ಷರು, ಸದಸ್ಯರ ಅವಧಿಯಲ್ಲಿ ಪುರಸಭೆ ಆಡಳಿತದಲ್ಲಿ ಹಲವಾರು ವೈಫಲ್ಯಗಳು ಮತ್ತು ಪುರಸಭೆಗೆ ಬಂದ ಹಲವು ಯೋಜನೆಗಳಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಜನತೆ ಈ ಬಾರಿ ಪುರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸುವ ನಿರೀಕ್ಷೆ ಹೆಚ್ಚಿದೆ. ಹಾಗಾಗಿ ಹಲವು ಜನಾಂಗದ ನಾಯಕರನ್ನು ಓಲೈಸಿಕೊಳ್ಳಲು ತಂತ್ರಕ್ಕೆ ಪ್ರತಿ ತಂತ್ರವನ್ನು ಹೆಣೆಯುವುದರಲ್ಲಿ ಮಗ್ನರಾಗಿದ್ದಾರೆ.
ಕಿಂಗ್ ಮೇಕರ್: ಮಾಜಿ ಸಚಿವ ಬಿ. ಶ್ರೀರಾಮಲು ಅವರ ಬಿಎಸ್‌ಆರ್ ಕಾಂಗ್ರೆಸ್ ಕೂಡ ತನ್ನ 10 ಅಭ್ಯರ್ಥಿಗಳನ್ನು ಸ್ಫರ್ಧೆಗೆ ಇಳಿಸಿ, 4 ರಿಂದ 5 ಅಭ್ಯರ್ಥಿಗಳನ್ನು ಗೆಲ್ಲಿಸಿ, ಮುಂದೆ ಆಡಳಿತ ಮಾಡುವ ಪಕ್ಷದಲ್ಲಿ ನಾನೇ ಕಿಂಗ್ ಮೇಕರ್ ಆಗಬೇಕೆಂದು ಸಜ್ಜಾಗಿ ನಿಂತಿದೆ.
ನೆಲೆ ಕಾಣದ ಜೆಡಿಎಸ್: ಒಂದು ಕಾಲದಲ್ಲಿ ಈ ಭಾಗದಲ್ಲಿ ಅತೀ ದೊಡ್ಡ ಪಕ್ಷವೆಂದು ಕರೆಯಿಸಿಕೊಂಡಿದ್ದ ಜೆಡಿಎಸ್ ಇಂದು ಸ್ಥಳೀಯ ಮುಖಂಡರ ಅಪನಂಬಿಕೆಯಿಂದ ಪಕ್ಷದ ಸಂಘಟನೆಗಿಂತ ಪಕ್ಷದ ನಾಶಕ್ಕೆ ಈ ಮುಖಂಡರು ಮುಂದಾಗಿದ್ದರಿಂದ ಈ ಪಕ್ಷ ನೆಲೆ ಕಳೆದುಕೊಂಡು ಕೇವಲ 2 ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿ ಕೈ ತೊಳೆದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement