ದೇಶ ಲೂಟಿ ಮಾಡಿದ ಕೀರ್ತಿ ಕಾಂಗ್ರೆಸ್ಗೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 4
ಕಾಮನ್ವೆಲ್ತ್, 2ಜಿ ಸ್ಪೆಕ್ಟ್ರಂ, ಆದರ್ಶ ವಸತಿ ಹಗರಣ ಸೇರಿದಂತೆ ಕೇಂದ್ರದ ಯುಪಿಎ ಸರ್ಕಾರ ಮಾಡಿರುವ ಸಾಲು ಸಾಲು ಹಗರಣಗಳ ಮೂಲಕ ದೇಶವನ್ನು ಲೂಟಿ ಮಾಡಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಟೀಕಿಸಿದರು.
ಅವರು ಸೋಮವಾರ ಪಟ್ಟಣದ ಹೆಸರೂರ ರಸ್ತೆಯಲ್ಲಿರುವ ಹಂಚಿನಾಳ ಅವರ ಸ್ವಿಮಿಂಗ್ಪೂಲ್ ಆವರಣದಲ್ಲಿ ಪುರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ನಾಯಕರು ಇಲ್ಲ ಸಲ್ಲದ ಆರೋಪಗಳ ಮೂಲಕ ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಹಿಂದೆ 50-60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ 5 ವರ್ಷಗಳ ಅಧಿಕಾರ ನಡೆಸಿದ ಬಿಜೆಪಿ ಈ ಹಿಂದೆ ಯಾವುದೇ ಸರ್ಕಾರಗಳು ನೀಡದಷ್ಟು ಅನುದಾನವನ್ನು ಪಟ್ಟಣ ಪಂಚಾಯ್ತಿ, ಪುರಸಭೆಗಳಿಗೆ, ನಗರಸಭೆಗಳಿಗೆ, ಮಹಾನಗರ ಪಾಲಿಕೆಗಳಿಗೆ ನೀಡುವ ಮೂಲಕ ರಾಜ್ಯದಲ್ಲಿ ಎಲ್ಲ ನಗರಗಳ ಅಭಿವೃದ್ಧಿ ಮಾಡಲಾಗಿದೆ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಪಕ್ಷ ಎಂದು ಬಿಂಬಿಸುತ್ತಿದ್ದಾರೆ. ಅದು ಶುದ್ಧ ಸುಳ್ಳು. ಅಲ್ಪಸಂಖ್ಯಾತರು ನಮ್ಮ ಅಣ್ಣ ತಮ್ಮಂದಿರಿದ್ದಂತೆ. ಈ ಹಿಂದಿನ ಯಾವುದೇ ಸರ್ಕಾರಗಳು ನೀಡದಷ್ಟು ಹೆಚ್ಚಿನ ( 280 ಕೋಟಿ) ಅನುದಾನವನ್ನು ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಮೀಸಲಿರಿಸಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಶಿರಹಟ್ಟಿ ವಿಧಾನಸಭಾ ಮತ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಮಾತನಾಡಿದರು. ಶಹರ ಬಿಜೆಪಿ ಅಧ್ಯಕ್ಷ ರಜನೀಕಾಂತ ದೇಸಾಯಿ, ಸುರೇಶ ಜೈನ್, ಆರ್.ಎಂ. ತಪ್ಪಡಿ, ಸುರೇಶ ಕ್ಯಾದಗಿಹಳ್ಳಿ, ಗುಡದಪ್ಪ ದೇಸಾಯಿ, ಪರಸಪ್ಪ ಕುಂಬಾರ, ರಾಘವೇಂದ್ರ ಚಿನ್ನಿ, ಚಿನ್ನಪ್ಪ ವಡ್ಡಟ್ಟಿ, ಮಹೇಶ ನಾಗರಹಳ್ಳಿ, ಬಸಪ್ಪ ಬನ್ನಿಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.