ವಿಧಾನಸಭೆ ಚುನಾವಣೆ ಮೇಲೆ ಕಣ್ಣು
ಲಕ್ಷ್ಮೇಶ್ವರ: ಸ್ಥಳೀಯ ಸಂಸ್ಥೆಗಳ ಚುನಾವಣೆ ದಿಢೀರ್ ಘೋಷಣೆಯಾಗಿದ್ದರಿಂದ ಎಲ್ಲ ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಲು ಸಾಧ್ಯವಾಗಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವೇದಿಕೆಯನ್ನಾಗಿ ಮಾಡಿಕೊಂಡು ಕೆಜೆಪಿ ಮುಂಬರುವ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿದೆ ಎಂದು ವಿಪ ಸದಸ್ಯ ಶಿವರಾಜ ಸಜ್ಜನರ ಹೇಳಿದರು.
ಅವರು ಸೋಮವಾರ ಪಟ್ಟಣದ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯಡಿಯೂರಪ್ಪ ಅವರ ಜನಪರ ಯೋಜನೆಗಳು ಜನರ ಮನಸ್ಸಿನಲ್ಲಿ ನೆಲೆಯೂರಿದ್ದು, ಜನರ ಭಾವನೆಗಳು ನಮ್ಮ ಪರವಾಗಿರುವುದರಿಂದ ನಮಗೆ ಯಾವುದೇ ಭಯವಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಗೆ ಎಲ್ಲ 224 ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳು ಸ್ಫರ್ಧಿಸುತ್ತಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸುವುದಿಲ್ಲ. ಅದಕ್ಕಾಗಿ ಮುಂದಿನ ವಿಧಾನಸಭೆಯ ಚುನಾವಣೆಯ ನಂತರ ನಮ್ಮ ಸಾಮರ್ಥ್ಯವೇನು ಎಂಬುದು ಎಲ್ಲ ಪಕ್ಷಗಳಿಗೆ ಗೊತ್ತಾಗಲಿದೆ ಎಂದರು. ನಾವು ಯಾವುದೇ ಪಕ್ಷದ ಜತೆಯಲ್ಲಿ ಯಾವುದೇ ರೀತಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಸದ್ಯದ ಸ್ಥಳೀಯ ಸಂಸ್ಥೆಯ ಚುನಾವಣೆಯನ್ನು ನಮ್ಮ ಪಕ್ಷದ ಸಂಘಟನೆಯನ್ನು ಬಲಪಡಿಸಲು ಉಪಯೋಗಿಸಿಕೊಂಡು, ಮುಂದಿನ ಚುನಾವಣೆಯಲ್ಲಿ ನಮ್ಮ ವಿರೋಧಿಗಳಿಗೆ ತಕ್ಕ ಉತ್ತರ ನೀಡಲಿದ್ದೇವೆ. ಅಲ್ಪಸಂಖ್ಯಾತರ ಬೆಂಬಲ ಕೆಜೆಪಿಗೆ ಹೆಚ್ಚಿನ ರೀತಿಯಲ್ಲಿ ದೊರಕುತ್ತಿರುವುದರಿಂದ ನಮಗೆ ಹೆಚ್ಚಿನ ವಿಶ್ವಾಸ ತುಂಬಿದೆ. ಹಾವೇರಿ ಜಿಲ್ಲೆಯಲ್ಲಿನ 6 ವಿಧಾನಸಭಾ ಕ್ಷೇತ್ರಗಳಲ್ಲಿ ಶಿಗ್ಗಾಂವ ಹೊರತು ಪಡಿಸಿದರೆ ಎಲ್ಲ 5 ಕ್ಷೇತ್ರಗಳಲ್ಲಿ ಕೆಜೆಪಿ ಗೆಲವು ನಿಶ್ಚಿತ ಎಂದರು.
ಗದಗ ನಗರಸಭೆಗೆ ನಮ್ಮ ಪಕ್ಷದ ಅಭ್ಯರ್ಥಿಗಳ ಆಯ್ಕೆಯನ್ನು ಮೊದಲೇ ಮಾಡಿದ್ದು, ಇದು ಪಕ್ಷಕ್ಕೆ ಲಾಭ ಮಾಡಿಕೊಡಲಿದೆ. ಈಚೆಗೆ ಗದಗ ನಗರಕ್ಕೆ ಮಾಜಿ ಸಿಎಂ ಯಡಿಯೂರಪ್ಪನವರು ಪ್ರಚಾರ ನಡೆಸಿದ ಸಂದರ್ಭದಲ್ಲಿ ಅಭೂತಪೂರ್ವ ಜನ ಬೆಂಬಲ ಕಂಡು ಬಂದಿದೆ. ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎನ್ನುವ ಲೆಕ್ಕಾಚಾರದಲ್ಲಿ ನಾವಿದ್ದೇವೆ ಎಂದರು.
ಕೆಜೆಪಿಯ ಜಿಲ್ಲಾ ಉಪಾಧ್ಯಕ್ಷ ಶಿವಣ್ಣ ಮಹಾಂತಶೆಟ್ಟರ, ಪಿ. ಗಿರಿಧರ, ಶಿರಹಟ್ಟಿ ಮತಕ್ಷೇತ್ರದ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ, ಹೊನ್ನಪ್ಪ ಮಾಳಗಿ, ಶೋಭಾ ಲಮಾಣಿ, ಅಶೋಕ ಹಳ್ಳಕೇರಿ, ಎಸ್.ಎ. ಹಾವಿನಾಳ, ನಾಗರಾಜ ಬಟಗುರ್ಕಿ, ಮಾರುತಿ ಪ್ರಸಾದ ಮುಂತಾದವರು ಹಾಜರಿದ್ದರು.