ಶುಲ್ಕ ಹೆಚ್ಚಳ, ಖಾಸಗಿ ವಿವಿ ಅನುಮತಿಗೆ ವಿರೋಧ
ಕನ್ನಡಪ್ರಭ ವಾರ್ತೆ, ಗದಗ, ಮಾ. 4
ಹಳೇ ವಿದ್ಯಾರ್ಥಿಗಳ ನಿರ್ವಹಣಾ ಶುಲ್ಕದ ಹೆಸರಿನಲ್ಲಿ ಧಾರವಾಡ ಕವಿವಿಯ ಎಲ್ಲ ಕಾಲೇಜು ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದನ್ನು ಹಾಗೂ ಖಾಸಗಿ ವಿವಿಗಳಿಗೆ ಅನುಮತಿ ನೀಡಿರುವುದನ್ನು ಖಂಡಿಸಿ ಸೋಮವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪ್ರತಿಭಟನೆ ನಡೆಸಿ, ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಧಾರವಾಡ ಕವಿವಿಯ ಎಲ್ಲ ಕಾಲೇಜುಗಳಲ್ಲಿ ಪ್ರತಿ ವಿದ್ಯಾರ್ಥಿಗಳ ನಿರ್ವಹಣೆಗೆಂದು ಹೊರಡಿಸಿದ ಈ ಆದೇಶ ಜಾರಿಗೊಂಡರೆ ಪ್ರತಿ ವಿದ್ಯಾರ್ಥಿ ರು. 250 ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ. ಈಗಾಗಲೇ ಈ ಭಾಗದಲ್ಲಿ ಸರಿಯಾದ ಮಳೆಯಾಗದೇ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿ ಹೆಚ್ಚುವರಿ ಶುಲ್ಕ ಭರಿಸುವುದು ಅಸಾಧ್ಯದ ಮಾತಾಗಿದ್ದು, ಈ ಕೂಡಲೇ ಈ ಕ್ರಮ ಕೈಬಿಡಬೇಕೆಂದು ಆಗ್ರಹಿಸಿದರು.
ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಹತ್ತಾರು ವರ್ಷಗಳಿಂದ ನಡೆಸಿದ ಒಳ್ಳೆಯ ಇತಿಹಾಸವಿರುವವರು ಶೈಕ್ಷಣಿಕ ಉದ್ದೇಶಕ್ಕಾಗಿಯೇ ಖಾಸವಿ ವಿವಿಗಳನ್ನು ರಾಜ್ಯದಲ್ಲಿ ಪ್ರಾರಂಭಮಾಡಿರುವುದಕ್ಕೆ ವಿರೋಧವಿಲ್ಲ. ಆದರೆ ಗುಣಮಟ್ಟವಿಲ್ಲದ ಬೆಂಗಳೂರು ಗಾರ್ಡ್ನ್ ಸಿಟಿಗಳಂತಹ ಕಾಲೇಜುಗಳಿಗೆ ಖಾಸಗಿ ವಿವಿಗಳನ್ನಾಗಿ ಅನುಮತಿ ನೀಡಿರುವುದು ನೋಡಿದರೆ ಯಾವುದೇ ಮಾನದಂಡಗಳಿಲ್ಲದೇ ಖಾಸಗಿ ವಿವಿಗಳಿಗೆ ಅನುಮತಿ ನೀಡಲಾಗಿದೆ ಎಂದೆನಿಸುತ್ತದೆ. ಹಲವು ಖಾಸಗಿ ಕಾಲೇಜುಗಳ ಉದ್ದೇಶವೇ ಹಣ ಗಳಿಸುವುದು. ಶಿಕ್ಷಣದ ಮೂಲಕ ಹಣ ಗಳಿಸಲು ಏನು ಬೇಕಾದರೂ ಮಾಡುವುದೆ ಇವರ ಧ್ಯೇಯ. ಇದೇ ಉದ್ದೇಶದಿಂದಲೇ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸಂಪೂರ್ಣ ಸ್ವಾಯತ್ತತೆಯನ್ನು ಬಯಸಿ ಖಾಸಗಿ ವಿವಿಗಳಾಗಿವೆ. ಈ ಸಂಸ್ಥೆಗಳು ಅಕ್ರಮ, ಭ್ರಷ್ಟಾಚಾರದ ಮೂಲಕವೇ ಖಾಸಗಿ ವಿವಿಯಾಗಿ ಅನುಮತಿ ಗಿಟ್ಟಿಸಿಕೊಂಡಿವೆ ಎಂಬ ಕೂಗು ಎಲ್ಲಡೆ ಕೇಳಿ ಬರುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಿವಿಗಳ ಬಗ್ಗೆ ಕಾಳಜಿಯಿಲ್ಲ: 2020ರ ವೇಳೆಗೆ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಶೇ. 25ಕ್ಕೆ ಹೆಚ್ಚಬೇಕು. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ನೂರಾರು ವಿಶ್ವ ವಿವಿಗಳಿವೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ, ನಮ್ಮ ದೇಶದಲ್ಲೂ ವಿವಿಗಳ ಸಂಖ್ಯೆ ಹೆಚ್ಚಾಗಬೇಕು ಎಂಬ ತರ್ಕ ಸರಿಯಾಗಿಯೇ ಇದೆ. ಆದರೆ, ಪ್ರಪಂಚದ ಒಳ್ಳೆಯ ವಿವಿಗಳ ಸಂಖ್ಯೆ 200ರಲ್ಲಿ ನಮ್ಮ ಭಾರತದ್ದು ಒಂದೂ ವಿವಿಗಳಿಲ್ಲದಿರುವುದು ಭಾರತದ ಉನ್ನತ ಶಿಕ್ಷಣವನ್ನು ನೀಡುವ ಸರ್ಕಾರ ಹಾಗೂ ವಿವಿಗಳಿಗೆ ದೊಡ್ಡ ಸವಾಲಾಗಿದೆ. ಆದರೆ ಸರ್ಕಾರ ತನ್ನ ವಿವಿಗಳ ಗುಣಮಟ್ಟದ ಬಗ್ಗೆ ಯಾವುದೇ ಕಾಳಜಿ ತೋರಿಸುತ್ತಿಲ್ಲ. ಹಣಕಾಸಿನ ಸಹಾಯ ನೀಡುತ್ತಿಲ್ಲ. ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿಲ್ಲ. ಹೀಗೆ ನೂರೆಂಟು ಸಮಸ್ಯೆಗಳಿಂದ ಸರ್ಕಾರಿ ವಿವಿಗಳು ನರಳುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ವಿವಿಗಳ ಗುಣಮಟ್ಟದ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದ ವಿವಿಗಳು ಈಗಾಗಲೇ ಭ್ರಷ್ಟಾಚಾರದಿಂದ ಹಾಗೂ ಜಾತಿಯ ಲೆಕ್ಕಾಚಾರ, ಹಣದ ವಹಿವಾಟು, ನೀಚ ರಾಜಕೀಯ ಚಟುವಟಿಕೆಗಳ ತಾಣವಾಗುತ್ತಿವೆ. ಅಲ್ಲದೇ ವಿವಿ ವಿಧೇಯಕ 2000 ತಿದ್ದುಪಡಿಯಿಂದ ರಾಜ್ಯ ಸರ್ಕಾರವು ವಿವಿಗಳ ಸಿಂಡಿಕೇಟ್ಗಳಿಗೆ 2 ವಿಧಾನಸಭೆ ಸದಸ್ಯರು ಹಾಗೂ ಓರ್ವ ವಿಧಾನ ಪರಿಷತ್ ಸದಸ್ಯರ ನೇಮಕ ಮಾಡುವುದರಿಂದ ವಿವಿಗಳು ಮತ್ತಷ್ಟು ರಾಜಕಾರಣದ ಅಖಾಡಗಳಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ಶೈಕ್ಷಣಿಕ ಹಿತದ ನಿರ್ಧಾರ ಕೈಗೊಳ್ಳಲು ಅಸಾಧ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ಕಾರಣ ಸಿಂಡಿಕೇಟ್ನಲ್ಲಿ ಎಂಎಲ್ಎ ಹಾಗೂ ಎಂಎಲ್ಸಿ ನೇಮಕ ಮಾಡುವ ಕ್ರಮ ಸರಿಯಲ್ಲವೆಂದರು.
ಶರಣು ಚೌದರಿ, ವಿ.ಬಿ. ಗುಗ್ಗರಿ, ಜೆ.ಡಿ.ಬೂದಿಹಾಳ, ಎಂ.ಎಸ್. ನಾಯಕ, ಪಿ.ಬಿ. ಕಾಟಿಗಾರ, ಎಸ್.ಎಸ್. ಕುರಿ, ಆರ್.ಎಸ್. ಗುಬ್ಬಿ, ಜಿ.ಸಿ. ಹೂಗಾರ, ಜ್ಯೋತಿ ಎಂ, ಶೈಲಾ, ವರ್ಷಾ, ಜಯಶ್ರೀ ಮುಂತಾದವರು ಪಾಲ್ಗೊಂಡಿದ್ದರು.
ನರಗುಂದ: ವಿದ್ಯಾರ್ಥಿಗಳ ಪ್ರತಿಭಟನೆ
ನರಗುಂದ: ಧಾರವಾಡದ ಕವಿವಿಯಲ್ಲಿ ರು. 250 ಪರೀಕ್ಷಾ ಶುಲ್ಕವನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಸಿದ್ದೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ವರ್ಗಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಪ್ರತಿ ವರ್ಷ ಕವಿವಿ ಪರೀಕ್ಷೆ ಶುಲ್ಕದಲ್ಲಿ ರು. 250 ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತಿದೆ. ಮೇಲಾಗಿ ಈ ಹಣ ಕಾಲೇಜಿನ ಅಭಿವೃದ್ಧಿಗಾಗಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಬರುವುದಿಲ್ಲ. ಸ್ವ-ಹಿತಾಸಕ್ತಿಗೆ ಹೆಚ್ಚುವರಿ ಹಣ ಪಡೆಯುತ್ತಿದೆ ಎಂದು ಆರೋಪಿಸಿದರು. ಪ್ರಾಚಾರ್ಯೆ ನೀಲಾಂಬಿಕಾ ಪಟ್ಟಣಶೆಟ್ಟಿಯವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ಅಕ್ಷಯ ಜೋಶಿ, ಮಂಜುನಾಥ ಪಲ್ಲೇದ, ಮಂಜು ಕವಡನ್ನವರ, ಆನಂದ ಕೆಂಚನ್ನಗೌಡ್ರ, ಮುತ್ತು ನಾಯ್ಕರ, ಸುಧಾ ಗುಜಮಾಗಡಿ, ವೀರೇಶ ಡಂಬಳ, ಮುತ್ತು ಹೂಗಾರ, ಶೃತಿ ದೇಶಪಾಂಡೆ, ಸಿದ್ದು ಹೂಗಾರ, ಸಾಗರ ರಾಮದುರ್ಗ, ಶಿವು ಭೂಸಾರೆ, ಅನಿಲ ಮುನವಳ್ಳಿ ಮುಂತಾದವರು ಉಪಸ್ಥಿತರಿದ್ದರು.