ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಭ್ಯರ್ಥಿಗಳಿಗೆ ಲೆಕ್ಕ ತೋರಿಸುವ ಚಿಂತೆ

Lingaraj Badiger
Updated On : 6 Mar 2013, 11:45 am

ಕನ್ನಡಪ್ರಭ ವಾರ್ತೆ, ನರಗುಂದ, ಮಾ. 5
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ವಿಧಾನಸಭಾ ಚುನಾವಣೆ ನಂತರ ನಡೆಯಬಹುದೆಂದು ಸ್ಥಳೀಯ ಸಂಸ್ಥೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಆರಾಮಾಗಿಯೇ ಇದ್ದರು. ಆದರೆ, ಚುನಾವಣಾ ಆಯೋಗವು ದಿಢೀರನೆ ಚುನಾವಣೆ ಘೋಷಣೆ ಮಾಡುತ್ತಿದ್ದಂತೆ ಅಭ್ಯರ್ಥಿಗಳಿಗೆ ಚುನಾವಣೆ ಹೇಗೆ ಎದುರಿಸಬೇಕೆನ್ನುವ ಚಿಂತೆ ಒಂದೆಡೆಯಾದರೆ, ಚುನಾವಣಾ ಆಯೋಗಕ್ಕೆ ಖರ್ಚು, ವೆಚ್ಚ ತೋರಿಸುವ ದೊಡ್ಡ ತಲೆನೋವಿನ ಚಿಂತೆ ಕಾಡುತ್ತಿದೆ.
ನರಗುಂದ ಪಟ್ಟಣದ ಪುರಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಬಿಎಸ್‌ಆರ್ ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಸೇರಿದಂತೆ 23 ವಾರ್ಡ್‌ಗಳಿಗೆ 64 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಿಗೆ ಚುನಾವಣಾ ಆಯೋಗದ ನಿಯಮದ ಪ್ರಕಾರ ಪ್ರತಿ ದಿನ ಅಭ್ಯರ್ಥಿಗಳು ಖರ್ಚು ಮಾಡಿದ ವಿವರವನ್ನು ಚುನಾವಣಾ ಅಧಿಕಾರಿಗಳಿಗೆ ನೀಡಬೇಕು. ಇಲ್ಲವೇ 2 ದಿನಕ್ಕಾದರೂ ತಮ್ಮ ಖರ್ಚುವೆಚ್ಚದ ಕುರಿತು ಮಾಹಿತಿ ನೀಡಬೇಕು ಎಂಬ ನಿಯಮ ರೂಪಿಸಿದ್ದು, ಇದರಿಂದ ಕಣದಲ್ಲಿರುವ ಅಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಡಿಮೆ ಅವಧಿಯಲ್ಲಿ ಪ್ರತಿ ಮನೆ ಮನೆಗೆ ಹೋಗಿ ಮತದಾರರ ಭೇಟಿ ಮಾಡಿ ಮತ ಯಾಚಿಸುವುದು ಒಂದೆಡೆಯಾದರೆ, ಮತ್ತೊಂದೆಡೆ ತಮ್ಮ ಹಿಂದಿರುವ ಎಲ್ಲ ಜನರನ್ನು ಸಮಾಧಾನ ಪಡಿಸುವುದಕ್ಕೆ ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಅಂಥದರಲ್ಲಿ ಯಾವ ಕಾರ್ಯಕ್ಕೆ ಎಷ್ಟು ಹಣ ಖರ್ಚು ಮಾಡಿದ ವಿವರವನ್ನು ಲೆಕ್ಕ ಕೊಡುವುದೇ ಇವರಿಗೆ ಸಮಸ್ಯೆಯಾಗಿದೆ. ಮೇಲಾಗಿ ಚುನಾವಣಾ ಆಯೋಗದ ನಿಯಮದ ಪ್ರಕಾರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ದಿನದಿಂದ ಮತದಾನವಾಗುವ ವರೆಗೆ ರು. 1,50,000 ಮಾತ್ರ ಖರ್ಚು ಮಾಡಬೇಕೆನ್ನುವ ನಿಯಮದಿಂದ ಅಭ್ಯರ್ಥಿಗಳು ಲೆಕ್ಕ ತೋರಿಸಲು ತಲೆ ಕೆಡಿಸಿಕೊಳ್ಳಬೇಕಾಗಿದೆ.
ಅಭ್ಯರ್ಥಿಗಳಿಂದ ಹೆಚ್ಚಿನ ಖರ್ಚು: ಪ್ರತಿ ಅಭ್ಯರ್ಥಿ ತಾನು ಪರವಾನಿಗೆ ಪಡೆದ ವಾಹನ, ಇನ್ನಿತರೇ ಕಾರ್ಯಗಳಿಗಾಗಿ ಪ್ರತಿದಿನ ರು. 30-50 ಸಾವಿರಗಳ ವರೆಗೆ ಖರ್ಚು ಮಾಡುತ್ತಿದ್ದಾನೆ. ಇದರಿಂದ ಒಟ್ಟಾರೆ ಖರ್ಚು ಗಮನಿಸಿದಲ್ಲಿ ರು. 1.50 ಲಕ್ಷಕ್ಕೂ ಅಧಿಕ ಖರ್ಚಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಚುನಾವಣಾ ಆಯೋಗದ ಹಳೇ ಕಾಲದ ನಿಯಮದ ಪ್ರಕಾರ ಒಬ್ಬ ಅಭ್ಯರ್ಥಿ ಕೇವಲ ರು. 1.50 ಲಕ್ಷ ಮಾತ್ರ ಖರ್ಚು ಮಾಡಬೇಕು. ಅದಕ್ಕಿಂತ ಹೆಚ್ಚು ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳುತ್ತಿದ್ದೆ. ಇಂದು ಡೀಸೆಲ್ ಬೆಲೆ ಎಷ್ಟು ಹೆಚ್ಚಳವಾಗಿದೆ. ಆಹಾರ ಧಾನ್ಯದ ಬೆಲೆ ಎಷ್ಟು ಹೆಚ್ಚಾಗಿದೆ. ಪ್ರಿಂಟಿಂಗ್ ಪ್ರೆಸ್‌ಗಳ ಮುದ್ರಣ ವೆಚ್ಚದಲ್ಲಿ ಎಷ್ಟು ಹೆಚ್ಚಿದೆ. ಅದರ ಆಧಾರದಲ್ಲಿ ನಿಗದಿ ಮಾಡಬೇಕು. ಇಲ್ಲವಾದಲ್ಲಿ ಹೆಚ್ಚಿಗೆ ಖರ್ಚು ಮಾಡಿ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದರೂ ಆಶ್ವರ್ಯ ಪಡಬೇಕಿಲ್ಲ. ಅಭ್ಯರ್ಥಿಗಳು ಚುನಾವಣೆ ಎದುರಿಸಿದ 30 ದಿನದೊಳಗೆ ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡದೇ ಇದ್ದರೆ ಅಂಥವರ ವಿರುದ್ಧ ಚುನಾವಣಾ ಆಯೋಗವು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿರುವುದರಿಂದ ಅಭ್ಯರ್ಥಿಗಳು ಆದಷ್ಟು ಬೇಗ ಖರ್ಚು ವೆಚ್ಚ ತೋರಿಸುವ ಅನಿವಾರ್ಯತೆ ಇದೆ.
ಖರ್ಚು, ವೆಚ್ಚ ತೋರಿಸಬೇಕಾದ್ದರಿಂದ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಬ್ಯಾನರ್, ಕಟೌಟ್‌ಗೆ ಹೆಚ್ಚಿನ ಆದ್ಯತೆ ನೀಡದ ಕಾರಣ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದ ಪ್ರಿಂಟಿಂಗ್ ಪ್ರೆಸ್‌ನ ಮಾಲೀಕರು ನಿರಾಸೆಗೊಳ್ಳುವಂತಾಗಿದೆ.
-ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement