ಎಸ್‌ಡಿಎಂ ಆಸ್ಪತ್ರೆಗೆ ದೇಹದಾನ
ರೋಣ: ಪಟ್ಟಣದ ಶಿವಪೇಟಿಯ ನಿವಾಸಿ ಅಡಿವೆಪ್ಪ ವೀರಪ್ಪ ಕೆಂಚರೆಡ್ಡಿ ಅವರು ಸೋಮವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಅವರ ಆಶಯದಂತೆ ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ದೇಹದಾನ ಮತ್ತು ನೇತ್ರವನ್ನು ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ನೇತ್ರ ಚಿಕಿತ್ಸಾಲಯಕ್ಕೆ ಕುಟುಂಬ ಸದಸ್ಯರು ಒಪ್ಪಿಸಿದರು. ಅಡಿವೆಪ್ಪ ಕೆಂಚರೆಡ್ಡಿಯವರು ತಮ್ಮ ಮರಣದ ನಂತರ ದೇಹವನ್ನು ಧಾರವಾಡದ ಎಸ್‌ಡಿಎಂ ಸಂಸ್ಥೆಗೆ 2007ರ ಅಗಷ್ಟ 22ರಂದು ದೇಹದಾನಕ್ಕೆ ಒಪ್ಪಿಗೆ ನೀಡಿದ್ದರು.
ಅಪಘಾತ: ಹಲವರಿಗೆ ಗಾಯ
ಲಕ್ಷ್ಮೇಶ್ವರ: ಪಟ್ಟಣದ ಅಗಡಿ ಎಂಜಿನಿಯರಿಂಗ್ ಕಾಲೇಜು ಹತ್ತಿರ ಬಸ್ಸೊಂದು ರಸ್ತೆಯ ಬದಿ ಕಮರಿಗೆ ಉರುಳಿ ಬಿದ್ದು 7 ಜನ ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ರೋಣ ಡಿಪೋಕ್ಕೆ ಸೇರಿದ ಬಸ್ ಬದಾಮಿಯಿಂದ ಚಿಕ್ಕಮಗಳೂರಿಗೆ ಹೋಗುತ್ತಿದ್ದಾಗ ಅಗಡಿ ಎಂಜಿನಿಯರಿಂಗ್ ಕಾಲೇಜಿನ ಹತ್ತಿರವಿರುವ ಒಡೆಯರ ಮಲ್ಲಾಪುರ ಕ್ರಾಸ್ ಬಳಿ ಎದುರಿಗೆ ಬಂದ ಆಡಿನ ಮರಿಗಳನ್ನು ತಪ್ಪಿಸಲು ಬಸ್ ಚಾಲಕ ದಿಢೀರ್‌ನೆ ಬ್ರೇಕ್ ಒತ್ತಿದಾಗ, ಬಸ್ಸು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಅಪಘಾತದಲ್ಲಿ 7 ಪ್ರಯಾಣಿಕರು ಗಾಯಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.