ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗುಟ್ಟು ಬಿಡದ ಮತದಾರ, ಅಭ್ಯರ್ಥಿಗಳಲ್ಲಿ ಹೆಚ್ಚಿದ ಒತ್ತಡ

Lingaraj Badiger
Updated On : 6 Mar 2013, 11:37 am

- ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 5
ಪಟ್ಟಣದಲ್ಲಿ ಪಪಂ ಚುನಾವಣೆ ದಿನ ಸಮೀಪಿಸುತ್ತಿದ್ದು, ಅಭ್ಯರ್ಥಿಗಳು ಶತಾಯಗತಾಯ ಗೆಲ್ಲಲೇಬೇಕೆಂದು ತೀವ್ರ ಕಸರತ್ತು ನಡೆಸಿದ್ದಾರೆ.
ಮತದಾರರು ಮಾತ್ರ ಎಲ್ಲರಿಗೂ ತಲೆಯಾಡಿಸುತ್ತ ತನ್ನ ಗುಟ್ಟು ಬಿಡದೇ ಇರುವುದನ್ನು ಕಂಡ ಅಭ್ಯರ್ಥಿಗಳು ಹೆಚ್ಚಿನ ಒತ್ತಡಕ್ಕೊಳಗಾದಂತೆ ಕಂಡು ಬರುತ್ತಿದೆ. ಅದರಿಂದ ಅಭ್ಯರ್ಥಿಗಳು ಮೌನ ಮುರಿಯದ ಮತದಾರರಿಗೆ ಪದೇ ಪದೇ ನಮನ್ನೇ ಬೆಂಬಲಿಸಿ ಎಂದು ಗೋಗರೆದು ಮನವಿ ಮಾಡುತ್ತಿದ್ದಾರೆ.
ಜಾತೀಯತೆ, ಗುಂಪುಗಾರಿಕೆಯಿಂದಲೇ ಕೂಡಿರುವ ಈ ಚುನಾವಣೆಯಲ್ಲಿ ಮೂವರು ಪ್ರಭಾವಿ ನಾಯಕರಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಗಂಗಣ್ಣ ಮಹಾಂತಶೆಟ್ಟರ ಶಿರಹಟ್ಟಿ ತಾಲೂಕಿನವರೇ ಆಗಿದ್ದರಿಂದ ಸ್ಥಳೀಯ ಸಂಸ್ಥೆ ಚುನಾವಣೆಗಳು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿವೆ. ಹೇಗಾದರೂ ಮಾಡಿ ಹೆಚ್ಚಿನ ಸ್ಥಾನಗಳನ್ನು ತಮ್ಮ ಪಕ್ಷದ ತೆಕ್ಕೆಗೆ ತೆಗೆದುಕೊಂಡರೆ ಮುಂದೆ ವಿಧಾನಸಭಾ ಚುನಾವಣೆಗೆ ಸರಳವಾಗುತ್ತದೆಂಬ ನೀರಿಕ್ಷೆಯಲ್ಲಿದ್ದಾರೆ.
ಕಳೆದ ಚುನಾವಣೆಯಲ್ಲಿ ಶಿರಹಟ್ಟಿ ಪಟ್ಟಣ ಪಂಚಾಯಿತಿಯ 17 ಸ್ಥಾನಗಳ ಪೈಕಿ 14 ಸ್ಥಾನಗಳನ್ನು ಜೆಡಿಎಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಕಾಂಗ್ರೆಸ್ 2, ಪಕ್ಷೇತರ 1 ಸ್ಥಾನ ಪಡೆದು ತೃಪ್ತಿಪಟ್ಟಿದ್ದವು. ಆದರೆ, ಪ್ರಸಕ್ತ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಗೊಂದಲದಿಂದಾಗಿ ಮತದಾರ ಪಕ್ಷವನ್ನು ನೋಡಿ ಮತ ಚಲಾಯಿಸಬೇಕೋ ಅಥವಾ ಅಭ್ಯರ್ಥಿಯನ್ನು ಗಮನಿಸಿ ಬೆಂಬಲಿಸಬೇಕೋ ಎನ್ನುವ ಆಲೋಚನೆಯಲ್ಲಿ ತೊಡಗಿರುವುದು ಕಂಡುಬರುತ್ತಿದೆ.
ವ್ಯಕ್ತಿಯ ಪ್ರಭಾವವೇ ಹೆಚ್ಚು: ಇದುವರೆಗಿನ ಅಧಿಕಾರಾವಧಿಯಲ್ಲಿ ನೀಡಿರುವ ಯೋಜನೆಗಳನ್ನು ಗಮನಿಸಿ ಮತ ನೀಡಬೇಕೆಂದರೆ ಅಭ್ಯರ್ಥಿ ಮತದಾರನ ಮನಸ್ಸಿನಲ್ಲಿಲ್ಲ. ಇನ್ನೊಂದೆಡೆ ವ್ಯಕ್ತಿಗತವಾಗಿ ಅಭ್ಯರ್ಥಿಯನ್ನು ಗುರುತಿಸಿ ಮತ ಹಾಕಬೇಕೆಂದರೆ ಪಕ್ಷದ ವರ್ಚಸ್ಸಿಲ್ಲ. ಇದು ಕೂಡ ಚುನಾವಣೆಯ ಫಲಿತಾಂಶದಲ್ಲಿ ಏರುಪೇರಾಗುವ ಲಕ್ಷಣ ಕಂಡುಬರುತ್ತಿದೆ. ಅದಾಗ್ಯೂ ಪಕ್ಷದ ವರ್ಚಸ್ಸಿಗಿಂತ ಅಭ್ಯರ್ಥಿಯ ವೈಯಕ್ತಿಕ ಪ್ರಭಾವವೇ ಇಲ್ಲಿ ಹೆಚ್ಚು ಪರಿಣಾಮ ಬೀರುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಮತದಾರರು ಸ್ಪಷ್ಟ, ನಿಖರ ಮಾಹಿತಿ ನೀಡುತ್ತಿಲ್ಲ. ಎಲ್ಲ ಅಭ್ಯರ್ಥಿಗಳಿಗೂ ನಿಮಗೇ ಮತ ಹಾಕುತ್ತೇವೆಂದು ಹೇಳುತ್ತಾ, ಯಾರೊಂದಿಗೂ ದ್ವೇಷ ಸಾಧಿಸದೇ ಮೌನಕ್ಕೆ ಶರಣಾಗಿದ್ದಾರೆ. ಚುನಾವಣೆ ಫಲಿತಾಂಶ ಬಂದ ನಂತರವಷ್ಟೇ ಮತದಾರರು ನಿಲುವು ಹೋರ ಬೀಳಲಿದೆ. ಅದೃಷ್ಟ ಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.
ಅಭ್ಯರ್ಥಿಗಳ ಪರ ಪ್ರಚಾರ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಸೋಮವಾರ ಸಂಜೆ ಎಲ್ಲ ವಾರ್ಡ್‌ಗಳಲ್ಲಿಯೂ ರೋಡ್‌ಶೋ ಜರುಗಿತು. ಎಲ್ಲ ಪಕ್ಷಗಳ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ವಿನಂತಿಸಿದರು. ಬಹುತೇಕ ವಾರ್ಡ್‌ಗಳಲ್ಲಿ ಮತದಾರ ಮಾತ್ರ ತನ್ನ ಗೌಪ್ಯತೆ ಕಾಪಾಡಿಕೊಂಡಿರುವ ಕುರಿತು ಮುಖಂಡರಲ್ಲಿ ಚರ್ಚೆ ನಡೆಯಿತು. ಅಲ್ಲದೇ ಕೆಲವೊಂದು ವಾರ್ಡ್‌ಗಳಲ್ಲಿ ಮತದಾರ ಹಣ, ಹೆಂಡಕ್ಕೆ ಮಾರುಹೋಗಿರುವುದು ಕಂಡುಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement