ಜನಪರ ಕಾರ್ಯ ಕಾಂಗ್ರೆಸ್ಗೆ ಶ್ರೀರಕ್ಷೆ: ಪಾಟೀಲ
ಗದಗ: ಕಳೆದ 60 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಕೈಗೊಂಡ ಜನಪರ ಹಾಗೂ ಜನಹಿತ ಕಾರ್ಯಗಳನ್ನು ನಡೆಸುವುದರ ಮೂಲಕ ಜನಮನ್ನಣೆಗೆ ಪಾತ್ರವಾಗಿದ್ದು. ಈ ಜನಪ್ರೀಯ ಕಾರ್ಯಗಳೆ ಇಂದಿಗೂ ಕಾಂಗ್ರೆಸ್ ಪಕ್ಷಕ್ಕೆ ಶ್ರೀರಕ್ಷೆಯಾಗಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಈಚೆಗೆ ಸ್ಥಳೀಯ 28ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಅಕ್ಕಿ ಶಿವಲೀಲಾ ಬೆಂಬಲಾರ್ಥವಾಗಿ ಬುರುಬುರೆ ಪ್ಲಾಟಿನ ಗ್ರಾಮೀಣ ಕಾಂಗ್ರೆಸ್ ಉಪಾಧ್ಯಕ್ಷ ಡಿ.ಬಿ. ಹುಯಿಲಗೋಳರವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಜನರಿಗೆ ಶುದ್ಧ ಕುಡಿವ ನೀರನ್ನು ನೀಡುವ ಉದ್ದೇಶದಿಂದ ಕೆ.ಎಚ್. ಪಾಟೀಲ ಪ್ರತಿಷ್ಠಾನದ ಮೂಲಕ ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಿ ಜನರ ಆರೋಗ್ಯ ಕಾಪಾಡಲು ನಾವು ಕಂಕಣಬದ್ಧರಾಗಿದ್ದೇವೆ. ಈ ಯೋಜನೆ ಗದಗ ಜಿಲ್ಲೆಯಲ್ಲದೇ ರಾಷ್ಟ್ರ ಮಟ್ಟದಲ್ಲಿಯೂ ಪ್ರಸಿದ್ಧಿಯಾಗಿ ಕಾಂಗ್ರೆಸ್ ನಾಯಕರ ಗಮನಕ್ಕೆ ಬಂದು ದೇಶದ ಪ್ರತಿ ನಗರದ ವಾರ್ಡಿನಲ್ಲಿ 2 ಘಟಕಗಳನ್ನು ಸ್ಥಾಪಿಸುವ ವಿಚಾರವನ್ನು ಉದ್ದೇಶದಿಂದ ಪ್ರಸ್ತುತ ಕೇಂದ್ರದ ಬಜೆಟ್ನಲ್ಲಿ ಶುದ್ಧ ನೀರಿಗಾಗಿ ರು. 1,400 ಕೋಟಿ ಮೀಸಲಿಟ್ಟಿದೆ. ಕಾಂಗ್ರೆಸ್ ಪಕ್ಷ ಜನಪರ ಕಾರ್ಯಗಳಿಗೆ ಎಷ್ಟೊಂದು ಮಹತ್ವ ನೀಡುತ್ತಿದೆ ಎನ್ನುವುದು ಎಲ್ಲರಿಗೂ ಈಗ ಮನವರಿಕೆಯಾಗಿದೆ ಎಂದರು. ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ಬಳಗಾನೂರ, ನೀಲಮ್ಮ ಬೋಳನವರ, ಮೀನಾಕ್ಷಿ ಬೆನಕಣ್ಣನವರ, ಜಯಶ್ರಿ ಪಾಟೀಲ, ರಫಿ ಕಾಗದಗಾರ, ವಿ.ಬಿ. ಹುಬ್ಬಳ್ಳಿ ಉಪಸ್ಥಿತರಿದ್ದರು.
ಟಂಟಂ-ಟ್ರ್ಯಾಕ್ಟರ್ ಡಿಕ್ಕಿ: ಓರ್ವ ಸಾವು
ಲಕ್ಷ್ಮೇಶ್ವರ: ಸಮಿಪದ ಪು. ಬಡ್ನಿ ಗ್ರಾಮದ ಬಳಿ ಟ್ರ್ಯಾಕ್ಟರ್ ಮತ್ತು ಟಂಟಂ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಮೃತನನ್ನು ಆದ್ರಳ್ಳಿ ಗ್ರಾಮದ ಗುರಪ್ಪ ಸಿದ್ದಪ್ಪ ವಡ್ಡರ (45) ಎಂದು ಗುರುತಿಸಲಾಗಿದೆ. ಆದ್ರಳ್ಳಿ ಗ್ರಾಮದಿಂದ ಟಂಟನಲ್ಲಿ ಲಕ್ಷ್ಮೇಶ್ವರಕ್ಕೆ ಆಗಮಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಕಾರಣ ಗುರಪ್ಪ ವಡ್ಡರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಟಂಟಂನಲ್ಲಿದ್ದ ಉಳಿದ ನಾಲ್ವರು ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.