ತಂತ್ರಜ್ಞಾನ ಶಿಕ್ಷಣ ಬದುಕಿಗೆ ಹೆದ್ದಾರಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 5
ಇಂದಿನ ತಾಂತ್ರಿಕ ಯುಗದಲ್ಲಿ ಆಧುನಿಕ ತಂತ್ರಜ್ಞಾನ ಶಿಕ್ಷಣ ಬದುಕಿಗೆ ಹೆದ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಾಥಮಿಕ ಶಾಲಾ ದಿನಗಳಲ್ಲಿಯೇ ಮಕ್ಕಳಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದು ಅವಶ್ಯ ಎಂದು ಮುಖ್ಯೋಪಾಧ್ಯಾಯ ಎಂ.ಡಿ. ಸರಕಾವಸ್ ಹೇಳಿದರು.
ಅವರು ಈಚೆಗೆ ಸ್ಥಳೀಯ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಸರ್ ಸಿ.ವಿ. ರಾಮನ್ ಅವರ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಬದುಕಿನಲ್ಲಿ ಸತತ ಅಧ್ಯಯನ, ಕಠಿಣ ಪರಿಶ್ರಮ ಪ್ರತಿಭಾ ಕೌಶಲ್ಯಕ್ಕೆ ಪೂರಕವಾಗುತ್ತದೆ.
ವಿಜ್ಞಾನ ಸದ್ಬಳಕೆ ಮಾಡಿಕೊಂಡಾಗ ಮಾತ್ರ ವಿಶ್ವಕ್ಕೆ ಮಾದರಿಯಾಗುವಂತಹ ಸತ್ಪ್ರಜೆಯಾಗಲು ಸಾಧ್ಯ. ಅಂತಹ ವಿದ್ಯಾರ್ಥಿಗಳಾಗಿ ದೇಶದ ಕೀರ್ತಿ ಹೆಚ್ಚಿಸಿ ಎಂದು ಮಕ್ಕಳಿಗೆ ಕರೆ ನೀಡಿದರು.
ಎಸ್.ಎಂ. ಮತ್ತೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಜತೆಗೆ ಶಿಸ್ತುಪಾಲನೆ ಅವಶ್ಯ. ಕಾಲಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನ, ವಿದ್ಯೆ ಸಂಪಾದಿಸಿ ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ತಂತ್ರಜ್ಞಾನದ ಬೀಜ ಬಿತ್ತಿ ರಾಷ್ಟ್ರದ ತಂತ್ರಜ್ಞಾನಿಯನ್ನಾಗಿಸುವ ಕಾರ್ಯಕ್ಕೆ ಶಿಕ್ಷಕ ಸಮುದಾಯ ಮುಂದಾಗುವುದು ಅವಶ್ಯವಿದೆ ಎಂದರು.
ಎಫ್.ಎಂ. ಮಕಾಂದಾರ ಗಣಿತ ರಸಪ್ರಶ್ನೆ ನಡೆಸಿಕೊಟ್ಟರು. ಎ.ಬಿ. ರಡ್ಡೇರ, ವಿ.ಎಂ. ಬಡಿಗೇರ, ಎಂ.ಝಡ್. ಬೇಲೇರಿ, ಶ್ಯಾಮಸುಂದರ ಶಿಂಗ್ರಿ ಉಪಸ್ಥಿತರಿದ್ದರು.