ನರೇಗಲ್ಲ ಮಾದರಿ ಪಟ್ಟಣವನ್ನಾಗಿಸುವೆ
ಕನ್ನಡಪ್ರಭ ವಾರ್ತೆ, ನರೇಗಲ್ಲ. ಮಾ. 5
ಸ್ಥಳೀಯ ಪಪಂನಲ್ಲಿ ಹಿಂದಿನ ಅವಧಿಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ದೊರೆಯದ ಕಾರಣ ಎಷ್ಟೇ ಅನುದಾನ ಒದಗಸಿದ್ದರೂ ಕೆಲವು ಅಭಿವೃದ್ಧಿ ಕಾರ್ಯಗಳು ವಿಳಂಭವಾಗಿರಬಹುದು. ಆದರೆ, ಈ ಚುನಾವಣೆಯಲ್ಲಿ 17 ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸಂಪೂರ್ಣ ಬಹುಮತದೊಂದಿಗೆ ಆಯ್ಕೆ ಮಾಡಿದರೆ ನರೇಗಲ್ಲ ಪಪಂ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ, ಜತೆಗೆ ಮಾದರಿ ಪಟ್ಟಣವನ್ನಾಗಿಸುವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಭಾನುವಾರ ಸ್ಥಳೀಯ ಪಪಂಗೆ ಸ್ಪರ್ಧಿಸಿರುವ 17 ವಾರ್ಡ್ಗಳಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕೈಗೊಂಡು, ಬಳಿಕ ಗಣಪತಿ ದೇವಸ್ಥಾನದ ಸಭಾಮಂಟಪದಲ್ಲಿ ಜರುಗಿದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ಸುಮ್ಮನೆ ಮತಯಾಚನೆಗೆ ಬಂದಿಲ್ಲ. ಈ ಪಟ್ಟಣಕ್ಕೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಪಟ್ಟಣಕ್ಕೆ ಸುಮಾರು ರು. 15 ಕೋಟಿ ಅನುದಾನದಲ್ಲಿ ರಸ್ತೆ ಮತ್ತು ಗಟಾರ ಕಾಮಗಾರಿಗಳನ್ನು ಮಾಡಿಸಿದ್ದೇನೆ. ಜನರ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಜಿಗಳೂರ ಗ್ರಾಮದಲ್ಲಿ 350 ಎಕರೆ ಜಮೀನಿನಲ್ಲಿ ರು. 80 ಕೋಟಿ ವೆಚ್ಚದಲ್ಲಿ ಬೃಹತ್ ಕೆರೆಯನ್ನು ನಿರ್ಮಿಸಲಾಗುತ್ತಿದ್ದು, ಬರುವ ಅಕ್ಟೋಬರ್-ನವೆಂಬರ್ನಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದರು. ಪಟ್ಟಣದಲ್ಲಿ 42 ಎಕರೆ ಜಮೀನಿನಲ್ಲಿ 1246 ಮನೆ ವಿತರಿಸಲಾಗಿದೆ. ನಾವು ಧರ್ಮ, ಜಾತಿ ವಿರೋಧಿಗಳಲ್ಲ. ನನ್ನ ಅವಧಿಯಲ್ಲಿ ಬಂದಿರುವ ಎಲ್ಲ ಅನುದಾನವನ್ನು ಸಮಾಜದ ಎಲ್ಲರಿಗೂ ಮುಟ್ಟಿಸಲು ಪ್ರಾಮಾಣಿಕನಾಗಿ ಶ್ರಮಿಸಿದ್ದೇನೆ. ಹಿಂದಿನ ಅವಧಿಯಲ್ಲಿ ರಾಜಕೀಯ ಪಕ್ಷಗಳು ಮಾಡದ ಕಾರ್ಯಗಳನ್ನು ಇಂದು ಬಿಜೆಪಿಯಿಂದ ಮಾಡಲಾಗಿದ್ದು, ಮಾ. 7 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕೋರಿದರು.
ಎಚ್.ಎಸ್. ಸೋಂಪುರ, ಪಪಂ ಮಾಜಿ ಅಧ್ಯಕ್ಷ ಶರಣಪ್ಪ ಕಲಾಲಬಂಡಿ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಜಿಲ್ಲಾ ಎಸ್ಸಿ, ಎಸ್ಟಿ, ಘಟಕದ ಅಧ್ಯಕ್ಷ ಬಸವರಾಜ ತಳವಾರ, ಶಶಿಧರ ಸಂಕನಗೌಡ್ರ, ಅಂದಪ್ಪ ಮಡಿವಾಳರ ಹಾಗೂ ಬಿಜೆಪಿ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಬಸವರಾಜ ಕೊಟಗಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಜರುಗಿತು.