ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಹಿರಂಗ ಪ್ರಚಾರಕ್ಕೆ ತೆರೆ

Lingaraj Badiger
Updated On : 6 Mar 2013, 11:37 am

 ಪಟ್ಟಣದ ಪುರಸಭೆ ಚುನಾವಣೆ ಇನ್ನಿತರೇ ಭಾಗಗಳಿಗಿಂತ ಭಿನ್ನವಾಗಿದೆ. ಪ್ರತಿಯೊಂದು ಪಕ್ಷಗಳ ನಾಯಕರು ನಾವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆಂದು ಹೇಳುತ್ತಿದ್ದಾರೆ. ಎಲ್ಲರೂ ಸ್ಪಷ್ಟ ಬಹುಮತ ಪಡೆಯುವುದಾದರೆ ಸೋಲುವವರ್ಯಾರು ಎನ್ನುವುದೇ ಪ್ರಶ್ನೆಯಾಗಿದೆ. 23 ವಾರ್ಡ್‌ಗಳಲ್ಲಿನ 105 ಜನ ಅಭ್ಯರ್ಥಿಗಳ ಬಹಿರಂಗ ಪ್ರಚಾರ ಸೋಮವಾರ ಸಂಜೆ ಅಂತ್ಯಗೊಂಡಿದೆ. ಪ್ರಚಾರದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿರುವ ಬಹುತೇಕ ಎಲ್ಲ ಹೋಟೆಲ್‌ಗಳು, ಖಾನಾವಳಿಗಳು ಜನರಿಂದ ತುಂಬಿದ್ದವು. ಎಲ್ಲೆಡೆ ಕಾರ್ಯಕರ್ತರ ರಂಗು ರಂಗಿನ ಮಾತುಗಳೇ ಕೇಳಿ ಬರುತ್ತಿದ್ದವು.

ಈ ಹಿಂದೆ ಯಾವುದೇ ಸರ್ಕಾರಗಳು ಸ್ಥಳೀಯ ಸಂಸ್ಥೆಗಳಿಗೆ ನೀಡಿದಷ್ಟು ಹೆಚ್ಚಿನ ಅನುದಾನವನ್ನು ಬಿಜೆಪಿ ಸರ್ಕಾರ ನೀಡಿದೆ. ಹೆಸರೂರ ಆಶ್ರಯ ಕಾಲೋನಿ ಯಿಂದ ಕಡ್ಲಿಪೇಟೆ, ಎಸ್.ಎಸ್. ಪಾಟೀಲ ನಗರದವರೆಗೆ, ಮುಂಡರಗಿ ಪಟ್ಟಣದ 23 ವಾರ್ಡ್‌ಗಳಲ್ಲಿ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಶಾಸಕ ರಾಮಣ್ಣ ಲಮಾಣಿಯವರು ತಮ್ಮ 5 ವರ್ಷದ ಆಡಳಿತಾವಧಿಯಲ್ಲಿ ವಿವಿಧ ವಾರ್ಡ್‌ಗಳ ಅಭಿವೃದ್ಧಿಗಾಗಿ ರು. 24 ಕೋಟಿ ಹಾಗೂ ಒಳಚರಂಡಿ ವ್ಯವಸ್ಥೆಗೆ ರು. 20 ಕೋಟಿ ಅನುದಾನ ತಂದಿದ್ದಾರೆ. 2 ಬಾರಿ ಸಿಎಂ ಅವರಿಂದ ವಿಶೇಷ ಅನುದಾನವನ್ನು ತರುವ ಮೂಲಕ ಹೆಚ್ಚಿನ ಅಭಿವೃದ್ಧಿ ಕೆಲಸಕ್ಕೆ ಮುನ್ನುಡಿ ಬರೆದಿದ್ದಾರೆ. ಹೀಗಾಗಿ ಮತದಾರ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ಭರವಸೆ ನಮಗಿದೆ.
-ಕರಬಸಪ್ಪ ಹಂಚಿನಾಳ
ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ

ಮುಂಡರಗಿ ಪಟ್ಟಣದಲ್ಲಿರುವ 23 ವಾರ್ಡ್‌ಗಳಲ್ಲಿ ಎಲ್ಲ ವರ್ಗದ ಜನರಿಗೆ ಕಾಂಗ್ರೆಸ್ ಪಕ್ಷ ಸಮಾನವಾಗಿ ಅವಕಾಶ ನೀಡಿದೆ. ಈ ಹಿಂದಿನ ಸದಸ್ಯರ ಮನವೊಲಿಸುವ ಮೂಲಕ ಹೊಸಬರಿಗೆ ಹಾಗೂ ಯುವಕರಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಿದೆ. ಈ ಹಿಂದೆ ಪುರಸಭೆಯಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಗಳ ಅಧಿಕಾರವನ್ನು ನೋಡಿ ಜನತೆ ಬೇಸರಗೊಂಡಿದ್ದಾರೆ. ಈ ಬಾರಿ ನಮ್ಮ ಪಕ್ಷದ 16 ರಿಂದ 18 ಅಭ್ಯರ್ಥಿಗಳು ಆಯ್ಕೆಯಾಗುವುದು ಖಚಿತ.
- ಹೇಮಂತಗೌಡ ಪಾಟೀಲ
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ಕಳೆದ ಚುನಾವಣೆಯಲ್ಲಿ 7 ಸ್ಥಾನಗಳಲ್ಲಿ ಜೆಡಿಎಸ್ ಗೆಲವು ಸಾಧಿಸಿತ್ತು. ಇದೀಗ ಹೆಚ್ಚಿನ ತಯಾರಿ ನಡೆಸಿದ್ದು, ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಸ್ಥಳೀಯ ಗಣ್ಯರ ಮಾರ್ಗದರ್ಶನದಲ್ಲಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಭರವಸೆ ನಮಗಿದೆ. ನಮ್ಮ ಅಭಿವೃದ್ಧಿ ಕಂಡ ಮತದಾರ ನಮಗೆ ಆಶೀರ್ವದಿಸಲಿದ್ದಾನೆ.
- ಎಂ.ಜಿ. ವಡ್ಡಟ್ಟಿ
ಜೆಡಿಎಸ್ ತಾಲೂಕು ಅಧ್ಯಕ್ಷ.
ಪ್ರಜ್ಞಾವಂತ ಮತದಾರರು ಈ ಹಿಂದಿನ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಧಿಕಾರವನ್ನು ನೋಡಿ ಬೇಸತ್ತಿದ್ದಾರೆ. ಇವುಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ನಿರ್ಧರಿಸಿ, ಇದೀಗ ಬದಲಾವಣೆ ಬಯಸಿದ್ದಾರೆ. ಬಿ. ಶ್ರೀರಾಮಲು ಅವರ ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ 18 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ನಾವು ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸುವೆವು.
-ವೈ.ಎನ್. ಗೌಡರ
ವಕ್ತಾರರು, ಬಿಎಸ್‌ಆರ್ ಕಾಂಗ್ರೆಸ್
ಕೊನೆಯ ಕ್ಷಣದಲ್ಲಿ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿ, ಕೇವಲ 10 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಬಿ.ಎಸ್. ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಜನಪರ, ರೈತಪರವಾದ ಆಡಳಿತವನ್ನು ಮೆಚ್ಚಿ ಮತದಾರರು ಕೆಜೆಪಿ ಅಭ್ಯರ್ಥಿಗಳಿಗೆ ಮತ ಹಾಕಲಿದ್ದಾರೆ. ಪುರಸಭೆಯಲ್ಲಿ 4 ರಿಂದ 6 ಸ್ಥಾನ ಕೆಜೆಪಿ ಮಡಿಲಿಗೆ ಬೀಳಲಿವೆ.
- ಕಾಂತರಾಜ ಹಿರೇಮಠ
ಅಧ್ಯಕ್ಷರು, ತಾಲೂಕು ಕೆಜೆಪಿ, ಮುಂಡರಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement