13ರಿಂದ ದ್ವಿತೀಯ ಪಿಯು ಪರೀಕ್ಷೆ
ಗದಗ: ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಗಳು ಮಾ. 13ರಂದು ಪ್ರಾರಂಭವಾಗಲಿದ್ದು, ಗದುಗಿನ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು ಮಾ. 10ರ ಒಳಗಾಗಿ ತಮ್ಮ ಹಾಲ್ ಟಿಕೆಟ್‌ಗಳನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ.
ನಾಳೆ ಮಹಿಳೆಯರಿಗಾಗಿ ಕಾನೂನು ಅರಿವು ಶಿಬಿರ
ಗದಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಜಿಲ್ಲಾ ಘಟಕ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಮಾ. 8ರ ಸಂಜೆ 5 ಗಂಟೆಗೆ ತಾಲೂಕಿನ ಹುಲಕೋಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಹಿಳೆಯರಿಗಾಗಿ ಕಾನೂನು ಅರಿವು-ನೆರವು ಶಿಬಿರ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಚ್. ಆವಿನ ಉದ್ಘಾಟಿಸುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಎಸ್. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ತ್ವರಿತ ನ್ಯಾಯಾಲಯದ ಪೀಠಾಸೀನಾಧಿಕಾರಿ ಎಂ.ಎಸ್. ಪಾಟೀಲ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಉಮೇಶ ಮೂಲಿಮನಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ಆರ್. ಗುಡೂರ, ಆರ್.ಜಿ. ಲಮಾಣಿ, ಎಲ್.ಜಿ. ಹಿರೇಗೌಡ್ರ, ಎಂ.ಎಸ್. ರಾಮೇನಹಳ್ಳಿ ಆಗಮಿಸುವರು. ಭಾರತಿ ಶೆಟ್ಟರ ದೇವದಾಸಿ ಸಮರ್ಪಣ ನಿಷೇಧ ಕಾಯ್ದೆ, ವೈ.ಡಿ. ತಳವಾರ ಬಾಲ್ಯ ವಿವಾಹ ತಡೆ ಕಾಯ್ದೆ ಹಾಗೂ ಗೀತಾ ಅಸೂಟಿ ಮಹಿಳಾ ದೌರ್ಜನ್ಯ ತಡೆ ನಿಷೇಧ ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.