ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಎಸ್‌ಎಫ್‌ಐ ಪ್ರತಿಭಟನೆ

Lingaraj Badiger
Updated On : 7 Mar 2013, 11:33 am

ಗಜೇಂದ್ರಗಡ: ಹಳೆ ವಿದ್ಯಾರ್ಥಿಗಳ ಸಂಘ (ಅಲ್ಯುಮ್ನಿ) ಹೆಸರಿನಲ್ಲಿ ವಿಶ್ವವಿದ್ಯಾಲಯಗಳು ಕಾನೂನು ಬಾಹಿರವಾಗಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಎಸ್‌ಎಫ್‌ಐ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವವಹಿಸಿದ್ದ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ರಾಜ್ಯದ ಜನ ಭೀಕರ ಬರಗಾಲದಿಂದ ತತ್ತರಿಸಿದ್ದಾರೆ. ಹೊಟ್ಟೆಗೆ ಹಿಟ್ಟು ಇಲ್ಲದೇ ಸಾವಿಗೆ ಶರಣಾಗುತ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಬಂಡವಾಳ ಶಾಹಿಗಳಿಗೆ ಹಾಗೂ ಮಠಗಳಿಗೆ ಸಾವಿರಾರು ಕೋಟಿ ಕೊಟ್ಟಿದೆ. ಆದರೆ, ದೇಶದ ಯುವ ಶಕ್ತಿಯಾಗಿರುವ ವಿದ್ಯಾರ್ಥಿ ಸಮೂಹದ ಶಿಕ್ಷಣಕ್ಕೆ ಕೇವಲ ಶೇ. 15ರಷ್ಟು ಮಾತ್ರ ಮೀಸಲಿಡಬೇಕೆಂಬ ಸರ್ಕಾರದ ಧೋರಣೆ ತನ್ನ ಶಿಕ್ಷಣ ವಿರೋಧಿ ನೀತಿಯನ್ನು ಮತ್ತಷ್ಟು ಬಲಗೊಳಿಸಿದೆ ಎಂದು ದೂರಿದರು.
ಇದರಿಂದ ವಿಶ್ವವಿದ್ಯಾಲಯಗಳು ಎಲ್ಲ ಕಾರ್ಯಕ್ರಮಗಳನ್ನು ನಡೆಸಲು ಹೆಚ್ಚುವರಿ ಹಣ ವಿದ್ಯಾರ್ಥಿಗಳಿಂದಲೇ ವಸೂಲಿ ಮಾಡಬೇಕೆಂಬ ರಾಜ್ಯ ಸರ್ಕಾರದ ಶಿಕ್ಷಣ ಸಚಿವರ ಆಜ್ಞೆಯನ್ನು ಪರಿಪಾಲಿಸುತ್ತಿರುವ ವಿಶ್ವವಿದ್ಯಾಲಯಗಳ ಧೋರಣೆ ಖಂಡನಾರ್ಹ ಹಾಗೂ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ ಪ್ರತಿ ವಿಧ್ಯಾರ್ಥಿಯಿಂದ ಪ್ರತಿ ಸೆಮಿಸ್ಟರ್‌ಗೆ ರು. 250 ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಕ್ರಮ ವಿಶ್ವವಿದ್ಯಾಲಯ ನಿಲ್ಲಿಸಬೇಕೆಂದರು.
ಅಸೋಶಿಯೇಷನ್ ಅಲ್ಯುಮ್ನಿ  ಹಳೆ ವಿದ್ಯಾರ್ಥಿಗಳ ಒಕ್ಕೂಟವಾಗಿರುವುದರಿಂದ ಸ್ವ-ಇಚ್ಛೆಯಿಂದ ಉಚಿತ ಸದಸ್ಯತ್ವ ಪಡೆಯಲು ಅವಕಾಶ ಕೊಡಬೇಕು. ಈ ವಿಷಯವಾಗಿ ರಾಜ್ಯಪಾಲರು ವಿಶ್ವವಿಧ್ಯಾಲಯಗಳಲ್ಲಿನ ದುಂದು ವೆಚ್ಚ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಎಸ್‌ಎಫ್‌ಐ ರಾಜ್ಯ ಸಮಿತಿಯಿಂದ ವಿಶ್ವವಿಧ್ಯಾಲಯಗಳಿಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು.
ನಗರ ಸಮಿತಿ ಅಧ್ಯಕ್ಷ ಶಿವು ಚವ್ಹಾಣ ಮಾತನಾಡಿ, ರಾಜ್ಯದ ಎಲ್ಲ ಪದವಿ ಕಾಲೇಜ್‌ಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಸೇರಲು ಉಚಿತ ಪ್ರವೇಶ ನೀಡಬೇಕು. ಹಳೆ ವಿಧ್ಯಾರ್ಥಿಗಳ ನಿರ್ವಹಣಾ ಘಟಕದ ಶುಲ್ಕ ಕೈಬಿಡಬೇಕು. ಎಲ್ಲ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡಬೇಕೆಂದು ಒತ್ತಾಯಿಸಿದರು.
ಈ ಎಲ್ಲ ಬೇಡಿಕೆ ಈಡೇರಿಸದೇ ಹೋದರೆ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಬಾಲಕೃಷ್ಣ ಜಾಡಬಂಡಿ ಎಸ್.ಪಿ. ಮುರಾರಿ, ಲೊಕೇಶ ರಾಠೋಡ, ಪ್ರದೀಪ ಕುಲಕರಿ, ರೇಖಾನಾಯ್ಕರ, ಸುಮಂಗಲಾ ಉಡಪಿ, ಪ್ರಭಾವತಿ ಪಾಟೀಲ ಹಾಗೂ ಎಸ್‌ಎಫ್‌ಐ ಗಜೇಂದ್ರಗಡ ಮಹಿಳಾ ಸಮಿತಿ ಉಪಾಧ್ಯಕ್ಷೆ ಮಾನವ್ವ ರಾಠೋಡ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement