ನರೇಗಲ್ಲದಲ್ಲಿ ವಾಂತಿ-ಭೇದಿ: ಪರಿಶೀಲನೆ
ನರೇಗಲ್ಲ: ಸ್ಥಳಿಯ ಪಪಂ ವ್ಯಾಪ್ತಿಗೊಳಪಡುವ ಕೊಂಡಿ ಮತ್ತು ಈಟಿಯವರ ಓಣಿಯಲ್ಲಿ ವಾಂತಿ-ಭೇದಿ ಪ್ರಕರಣ ಕಾಣಿಸಿಕೊಂಡಿದ್ದು, ಜಿಲ್ಲಾ ಆರೋಗ್ಯ ಸಮೀಕ್ಷಣಾ ಅಧಿಕಾರಿ ಡಾ. ನೀಲಗುಂದ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿಯ ನೀರಿನ ಸಂಗ್ರಹಗಾರಕ್ಕೆ ಬಳಸಲ್ಪಡುವ ಟ್ಯಾಂಕ್‌ಗಳು ಶುಚಿಯಾಗಿದ್ದು, ಇದು ನೀರಿನ ಸಮಸ್ಯೆಯಲ್ಲ. ಈ ಸಮಸ್ಯೆ ಆಹಾರದಲ್ಲಿನ ವ್ಯತ್ಯಾಸದಿಂದಾಗಿದೆ. ಇತ್ತೀಚೆಗೆ ಕಂಡುಬಂದ ಈ ಸಮಸ್ಯೆಯನ್ನು ಬಗೆಹರಿಸಲು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಮಜರೇ ಗ್ರಾಮಗಳಲ್ಲಿ ಎಲ್ಲಿ ಎಣ್ಣೆ, ಕರಿದ ಪದಾರ್ಥಗಳನ್ನು ಬಳಸುತ್ತಿದ್ದಾರೆಯೋ, ಅದನ್ನು ತಕ್ಷಣದಿಂದ ಸ್ಥಗಿತಗೊಳಿಸಬೇಕೆಂದು ಸಂಬಂಧಿಸಿದ ಎಲ್ಲ ಅಂಗಡಿಗಳಿಗೆ ನೋಟಿಸ್ ಹೊರಡಿಸಲಾಗಿದೆ. ಆದರೂ, ಕೆಲವು ಅಂಗಡಿಗಳಲ್ಲಿ ಈ ತರಹದ ಪದಾರ್ಥಗಳನ್ನು ತಯಾರಿಸಿರುವುದನ್ನು ಮನಗಂಡು ಮುಖ್ಯಾಧಿಕಾರಿ ಹಾಗೂ ಅಭಿಯಂತರ ವಿ.ಪಿ. ಕಾಟೇವಾಲೆ ಹಾಗೂ ಸಿಬ್ಬಂದಿಯೊಂದಿಗೆ ಧಾವಿಸಿ, ಅಂತಹ ಅಂಗಡಿಗಳಲ್ಲಿನ ಆಹಾರ ಪದಾರ್ಥಗಳನ್ನು ತಕ್ಷಣವೇ ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಐ.ಕೆ. ಗುಡದಾರಿ ಮುಂತಾದವರು ಹಾಜರಿದ್ದರು.